ಬೆಂಗಳೂರು, ಮೇ 16-ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವಿವೇಕಾನಂದ ಸ್ಪರ್ಧಿಸಿದ್ದು, ಬಂಡಾಯದ ಬಿಸಿ ಎದುರಿಸುವಂತಾಗಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ವಿವೇಕಾನಂದ ಅವರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದು, ಅಧಿಕೃತ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಆದರೆ, ನಿನ್ನೆ ಬಿಜೆಪಿ ಅಭ್ಯರ್ಥಿಯಾಗಿ ಇ.ಸಿ.ನಿಂಗರಾಜು ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರಿದ್ದರೂ ಬಿಜೆಪಿ ಬಿ ಫಾರಂ ನೀಡಿಲ್ಲ. ಈ ಕ್ಷೇತ್ರ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು ಸ್ವತಂತ್ರ ಸ್ಪರ್ಧೆ ಮಾಡಲಿದ್ದಾರೆ. ಇವರಿಬ್ಬರೂ ಮೈತ್ರಿ ಪಕ್ಷಗಳಿಗೆ ತಲೆನೋವಾಗಿದ್ದಾರೆ.
ಈ ನಡುವೆ ಮೈಸೂರಿನಲ್ಲಿ ನಿಂಗರಾಜು ಅವರನ್ನು ಆರ್.ಅಶೋಕ್ ಅವರು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.ಈ ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ತಲಾ ಒಬ್ಬರು ಬಂಡಾಯ ಅಭ್ಯರ್ಥಿಗಳಿರುವುದು ನಾಯಕರನ್ನು ಚಿಂತೆಗೀಡು ಮಾಡಿದೆ. ಮೇ 20ರವರೆಗೂ ನಾಮಪತ್ರ ವಾಪಸ್ಸು ಪಡೆಯಲು ಅವಕಾಶವಿದ್ದು, ಅಷ್ಟರಲ್ಲಿ ನಿಂಗರಾಜು ಹಾಗೂ ಶ್ರೀಕಂಠೇಗೌಡರ ಮನವೊಲಿಸುವರೆ ಎಂಬುದನ್ನು ಕಾದು ನೋಡಬೇಕಿದೆ.