ಬೆಂಗಳೂರು,ಡಿ.27- ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಆಧಿಪತ್ಯ ಕೊನೆಗಾಣಿಸಲು ಹಲವು ವಿರೋಧದ ನಡುವೆಯೂ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದ ಬಿಜೆಪಿ-ಜೆಡಿಎಸ್ ದೋಸ್ತಿಗಳು ಈಗ ತಾನೊಂದು ತೀರ, ನೀನೊಂದು ತೀರ ಎನ್ನುವ ಹಂತಕ್ಕೆ ಬಂದಿವೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಎಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಹೇಳಿರುವುದು ಎರಡೂ ಪಕ್ಷಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ಹಾಗೂ ಕೆಲವರ ಸ್ವಪ್ರತಿಷ್ಠೆಯೇ ಕಾರಣ ಎಂಬುದನ್ನು ತೋರಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಮುಂಬರುವ 2028 ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಕಷ್ಟ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಏನೇ ಮಾತನಾಡಿದರೂ ಸಾಕಷ್ಟು ಅಳೆದು ತೂಗಿ ಮಾತನಾಡುವ ಗೌಡರು ಇದ್ದಕ್ಕಿದ್ದಂತೆ ಹೊಂದಾಣಿಕೆ ಕಷ್ಟ ಎಂದು ಹೇಳಿರುವುದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರ ಇದೆ ಎಂದು ಹೇಳಲಾಗುತ್ತಿದೆ. ಒಂದು ಮೂಲದ ಪ್ರಕಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆಡಿದ ಅದೊಂದೇ ಒಂದು ಮಾತು ಗೌಡರ ಕಣ್ಣು ಕೆಂಪಾಗುವಂತೆ ಮಾಡಿದೆ.
ಅದೇನೆಂದರೆ ಬಿಜೆಪಿ ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದೇ ಈ ವಿವಾದಕ್ಕೆ ಕಾರಣ ಎಂಬುದು ಕೇಳಿ ಬರುತ್ತಿರುವ ಮಾತು. ಹಾಗೆ ನೋಡಿದರೆ ಬಿಹಾರದಲ್ಲಿ ನಿತೀಶ್ ಕುಮಾರ್ ಎಂದಿಗೂ ಜೆಡಿಯೂ ಸ್ವತಃ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿರಲಿಲ್ಲ. ಅಷ್ಟರ ಮಟ್ಟಿಗೆ ಮೈತ್ರಿ ಧರ್ಮವನ್ನು ಪಾಲನೆ ಮಾಡಿದ್ದರು. ಆದರೆ, ಇಲ್ಲಿ ತಾಳಮೇಳ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ.
ಹಾಗೆ ನೋಡಿದರೆ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಉಭಯ ನಾಯಕರಲ್ಲಿ ಒಮತ ಇರಲಿಲ್ಲ. ಇದೊಂದು ರೀತಿ ಬಲವಂತದ ಮದುವೆ ಎನ್ನುವಂತಾಗಿತ್ತು. ತಳಮಟ್ಟದಲ್ಲೇ ಸಮಸ್ಯೆ ಸೃಷ್ಟಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸಂದರ್ಭದಲ್ಲಿ ಮೇಲಟ್ಟದಲ್ಲಿ ನಾಯಕರ ನಡುವೆ ಮಾತ್ರ ಭಿನ್ನಾಭಿಪ್ರಾಯ ಇದ್ದಿದ್ದಲ್ಲ. ಕೆಲವು ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಕಾರ್ಯಕರ್ತರ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಎದ್ದು ಕಾಣಿಸುತ್ತಿದ್ದವು. ನಾಯಕರು ಒಂದಾದರೂ ಕಾರ್ಯಕರ್ತರನ್ನು ಒಂದುಗೂಡಿಸುವುದು ಕಷ್ಟ ಎಂಬ ಅಭಿಪ್ರಾಯವಿದೆ.
ಇದೀಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೂ ಇದೇ ಸಮಸ್ಯೆ ಎದ್ದು ಕಾಣುತ್ತಿದೆ. ಮೇಲಟ್ಟದಲ್ಲಿ ನಾಯಕರು ಮೈತ್ರಿಗೆ ಸಮತಿ ಸೂಚಿಸಿದ್ದಾರೆ. ಹಾಗೂ ಹೊಂದಾಣಿಕೆಯ ಮೂಲಕ ಅಧಿಕಾರ ಹಂಚಿಕೊಳ್ಳುತ್ತಾರೆ. ಆದರೆ ತಳಮಟ್ಟದಲ್ಲಿ ಪಕ್ಷದ ಸಲುವಾಗಿ ಪರಸ್ಪರ ವೈರತ್ವದ ಭಾವನೆಯಲ್ಲಿರುವ ಕಾರ್ಯಕರ್ತರು ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವರನ್ನು ಸರಿಪಡಿಸುವುದು ಸುಲಭವಲ್ಲ ಎಂಬ ಅಭಿಪ್ರಾಯವನ್ನು ಎರಡೂ ಪಕ್ಷಗಳು ಶಾಸಕರು ವ್ಯಕ್ತಪಡಿಸುತ್ತಾರೆ. ಪರಿಣಾಮ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ತಳಮಟ್ಟದಲ್ಲಿ ಸಮಸ್ಯೆ ಸೃಷ್ಟಿಗೆ ಕಾರಣವಾಗಲಿದೆ ಎಂಬ ಅಭಿಪ್ರಾಯಗಳು ಸಹಜವಾಗಿ ಕೇಳಿಬರುತ್ತಿದೆ.
ಮೈತ್ರಿಗೆ ಯಾರೆಲ್ಲಾ ವಿರೋಧ ? :
ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿಗೆ ಬಿಜೆಪಿ ಹಾಗೂ ಜೆಡಿಎಸ್ ಎರಡು ಪಕ್ಷದ ಕೆಲವು ಶಾಸಕರ ವಿರೋಧ ಇದೆ. ಜೆಡಿಎಸ್ ಶಾಸಕಿ ಕರೆಮಾ ನಾಯಕ್ ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು.
ಸ್ಥಳೀಯವಾಗಿ ಬಿಜೆಪಿ ನಾಯಕರ ಜೊತೆಗಿನ ಭಿನ್ನಾಭಿಪ್ರಾಯವೇ ಈ ವಿರೋಧಕ್ಕೆ ಪ್ರಮುಖ ಕಾರಣವಾಗಿತ್ತು. ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಅಸಮಾಧಾನ ಹೊರ ಹಾಕಿದ್ದ ಶಾಸಕಿ, ಅವರೆಲ್ಲಾ ಸತತವಾಗಿ ನನಗೆ ತೊಂದರೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಸ್ಥಳೀಯವಾಗಿ ಬಿಜೆಪಿ ನಾಯಕರ ಜೊತೆಗಿನ ಸಂಘರ್ಷದ ಪರಿಣಾಮ ಇದೀಗ ಮೈತ್ರಿ ನಿರ್ಧಾರ ಅವರನ್ನು ಕಂಗಾಲಾಗಿಸಿದೆ. ಜೊತೆಗೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳು ಅವರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದವು.
ಮತ್ತೋವರ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಕೂಡಾ ಈ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದರು. ಕ್ಷೇತ್ರದಲ್ಲಿ ಅಸ್ತಿತ್ವದ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೈತ್ರಿಗೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಕ್ಷೇತ್ರದಲ್ಲಿ ಮೈತ್ರಿ ಅಂತ ಬಂದಾಗ ನಮ ರಾಜಕೀಯ ಅಸ್ತಿತ್ವದ ಪ್ರಶ್ನೆ ಬರುತ್ತದೆ. ಈ ಪ್ರಶ್ನೆ ನಮೆಲ್ಲಾ ನಾಯಕರನ್ನು ಕಾಡುತ್ತಿದೆ ಎಂದು ತಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರ ಹಾಕಿದ್ದರು.
ಇದು ಜೆಡಿಎಸ್ ಕಥೆಯಾದರೆ ಬಿಜೆಪಿ ನಾಯಕರಲ್ಲೂ ಮೈತ್ರಿಯ ಬಗ್ಗೆ ಅಸಮಾಧಾನವಿದೆ. ಕೆಲವು ಪ್ರಮುಖ ನಾಯಕರು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸದೇ ಇದ್ದರೂ, ಮತ್ತೆ ಕೆಲವರು ಬಹಿರಂಗವಾಗಿಯೇ ತಮ ವಿರೋಧವನ್ನು ದಾಖಲು ಮಾಡುತ್ತಿದ್ದಾರೆ. ಅದರಲ್ಲೂ ಮಾಜಿ ಸಚಿವ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಅವರು ಈ ಮೈತ್ರಿಗೆ ತಮ ವೈಯಕ್ತಿಕ ವಿರೋಧವನ್ನು ದಾಖಲು ಮಾಡಿದ್ದರು. ಕ್ಷೇತ್ರದಲ್ಲಿ ನನ್ನ ರಾಜಕೀಯ ಹೋರಾಟ ಜೆಡಿಎಸ್ ವಿರುದ್ಧವಾಗಿಯೇ ಮಾಡಿಕೊಂಡು ಬಂದಿದ್ದೇನೆ. ಇಂತಹ ಸಂದರ್ಭದಲ್ಲಿ ಎರಡು ಪಕ್ಷಗಳ ನಡುವೆ ಮೈತ್ರಿಗೆ ನನ್ನ ವಿರೋಧ ಇದೆ ಎಂದು ಹೇಳಿದ್ದರು.
ಮುಂದಿನ ಹಾದಿ ಕಠಿಣವಾಗಿರಲಿದ್ದು, ಸಂದಿಗ್ಧ ಪರಿಸ್ಥಿತಿ ತಂದೊಡ್ಡುವ ಸಾಧ್ಯತೆಗಳಿವೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಸದ್ಯದಲ್ಲೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಆ ನಂತರ ನಗರಸಭೆ, ಪುರಸಭೆ ಚುನಾವಣೆ ಇವೆ. ಬಹುಮುಖ್ಯವಾಗಿ 2028ರಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು ಅಲ್ಲೂ ಮೈತ್ರಿ ಕೆಮಿಸ್ಟ್ರಿ ಕೆಲಸ ಮಾಡಲಿದೆಯಾ ಎಂಬ ಪ್ರಶ್ನೆಗಳು ಈಗಲೇ ಉದ್ಭವಿಸುತ್ತಿವೆ.
ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರೂ ಸುಮನಿರುವುದಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಬಲಿಷ್ಠ. ಹೀಗಾಗಿ, ಅವರಿಂದಲೂ ಟಿಕೆಟ್‌ಗೆ ಹೆಚ್ಚಿನ ಬೇಡಿಕೆ ಬರಲಿದೆ, ಆಕಾಂಕ್ಷಿಗಳು ಹೆಚ್ಚಿರುತ್ತಾರೆ. ಆಗ ಪರಿಸ್ಥಿತಿ ಹೇಗಿರಲಿದೆ ಎಂಬುದು ಕುತೂಹಲ.
ಲೋಕಸಭೆ ಚುನಾವಣೆ ಪ್ರಧಾನಿ ಮೋದಿ ಹಾಗೂ ದೇಶದ ವಿಚಾರಗಳ ಮೇಲೆ ನಡೆದಿದೆ. ಆದರೆ, ವಿಧಾನಸಭೆ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಥಳೀಯ ವಿಚಾರ, ಸಮಸ್ಯೆಗಳ ಮೇಲೆ ನಡೆಯಲಿದೆ. ಹೀಗಾಗಿ, ಎರಡೂ ಪಕ್ಷಗಳಿಗೆ ಭಾರಿ ಸವಾಲು ಮುಂದಿದೆ.
