ಬೆಂಗಳೂರು,ಡಿ.27– ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸೀಬರ್ಡ್ ಬಸ್ ಬೆಂಕಿ ಅವಘಡ ಬೆನ್ನಲ್ಲೆ ಅದೇ ಕಂಪನಿಯ ಚಾಲಕನೊಬ್ಬ ಕುಡಿದು ವಾಹನ ಚಾಲನೆ ಮಾಡುತ್ತಿದ್ದಾಗ ಸಂಚಾರಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಚಾಲಕನ ನಿರ್ಲಕ್ಷ್ಯದಿಂದ ಪ್ರಯಾಣಿಕರ ಸುರಕ್ಷತೆ ಬಗ್ಗೆ ಆತಂಕ ಮೂಡಿಸಿದೆ. ರಾತ್ರಿ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಎಂದಿನಂತೆ ಉಪ್ಪಾರಪೇಟೆ ಸಂಚಾರಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ನಗರದಿಂದ ಗೋವಾಗೆ ಹೊರಟಿದ್ದ ಖಾಸಗಿ ಸೀಬರ್ಡ್ ಬಸ್‌ನ್ನು ತಡೆದು ಅನುಮಾನಾಸ್ಪದ ಮೇರೆಗೆ ಚಾಲಕನನ್ನು ಪರೀಕ್ಷೆ ಮಾಡಿದಾಗ ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದುದು ದೃಡಪಟ್ಟ ಹಿನ್ನೆಲೆಯಲ್ಲಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಬಸ್‌ನಲ್ಲಿದ್ದ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದ ಸಂಚಾರಿ ಪೊಲೀಸರು ತಕ್ಷಣ ಬೇರೆ ಚಾಲಕನ ವ್ಯವಸ್ಥೆ ಮಾಡಿ ಗೋವಾಗೆ ಬಸ್ ಕಳುಹಿಸಿಕೊಟ್ಟರು.ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಖಾಸಗಿ ಬಸ್‌ಗಳ ಮೇಲೆ ಮತ್ತಷ್ಟು ನಿಗಾವಹಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೊನ್ನೆ ಬೆಳಗಿನ ಜಾವ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಕಂಟೇನರ್ ಲಾರಿ ಡಿವೈಡರ್ ಹಾರಿ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಸೀಬರ್ಡ್ ಬಸ್‌ಗೆ ಅಪ್ಪಳಿಸಿದ್ದರಿಂದ ಬಸ್ ಬೆಂಕಿಗೆ ಆಹುತಿಯಾಗಿ ಬಸ್ ಚಾಲಕ ಸೇರಿದಂತೆ ಏಳು ಮಂದಿ ದಾರುಣವಾಗಿ ಸಜೀವದಹನವಾಗಿರುವ ಭೀಕರ ಘಟನೆ ಮಾಸುವ ಮುನ್ನವೇ ಇದೇ ಕಂಪನಿಯ ಚಾಲಕನ ನಿರ್ಲಕ್ಷ್ಯ ಬೆಳಕಿಗೆ ಬಂದಿರುವುದು ಆತಂಕ ಮೂಡಿಸಿದೆ.
ತೀವ್ರ ಕಾರ್ಯಾಚರಣೆ:
ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದು. ರಾತ್ರಿ ಹಲವು ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 400 ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ನಡೆಸಿ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಕುಡಿದು ವಾಹನ ಚಾಲನೆ ಮಾಡುತ್ತಾ ಪ್ರಯಾಣಿಕರ ಜೀವಗಳೊಂದಿಗೆ ಚೆಲ್ಲಾಟವಾಡುವ ಚಾಲಕರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನಗರ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
