Tuesday, November 26, 2024
Homeರಾಜ್ಯರಾಜ್ಯಾದ್ಯಂತ ಇಂದಿನಿಂದ ಒಂದು ವಾರ ಭಾರಿ ಮಳೆ ಸಾಧ್ಯತೆ

ರಾಜ್ಯಾದ್ಯಂತ ಇಂದಿನಿಂದ ಒಂದು ವಾರ ಭಾರಿ ಮಳೆ ಸಾಧ್ಯತೆ

ಬೆಂಗಳೂರು,ಮೇ 17- ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಇಂದಿನಿಂದ ಒಂದು ವಾರ ಕಾಲ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.ಪೂರ್ವ ಮುಂಗಾರು ಚೇತರಿಕೆ ಕಂಡಿದ್ದು, ರಾಜ್ಯಾದ್ಯಂತ ಮಳೆಯಾಗುವ ಮುನ್ಸುಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದಿನಿಂದ ಮೇ 21 ರವರೆಗೂ ಮಲೆನಾಡು ಭಾಗದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಆರೆಂಜ್‌ ಅಲರ್ಟ್‌ ಅನ್ನು ಹವಾಮಾನ ಇಲಾಖೆ ಘೋಷಿಸಿದೆ.

ಇಂದು ಮುಂಜಾನೆ ರಾಜಧಾನಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದೆ. ವಿಧಾನಸೌಧ, ಕೆ.ಆರ್‌.ಮಾರುಕಟ್ಟೆ, ಮೆಜೆಸ್ಟಿಕ್‌, ಶಿವಾಜಿನಗರ, ಬಸವನಗುಡಿ, ಜಯನಗರ, ಬನಶಂಕರಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಬೆಳಿಗ್ಗೆ ಮಳೆಯಾಗಿದೆ.

ಮೇಲೈ ಸುಳಿಗಾಳಿ, ಟ್ರಫ್‌ ಹಾಗೂ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಆಗಾಗ್ಗೆ ತುಂತುರು ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ನೈರುತ್ಯ ಮುಂಗಾರು ಸಕಾಲಕ್ಕೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಬಂಗಾಳಕೊಲ್ಲಿ, ಹಿಂದೂ ಮಹಾಸಾಗರ ಹಾಗೂ ಅರಬ್ಬೀ ಸಮುದ್ರದಲ್ಲಿ ಮಳೆಗೆ ಪೂರಕವಾದ ವಾತಾವರಣಗಳು ನಿರ್ಮಾಣವಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ.

ಬೆಂಗಳೂರು, ಬೆಂಗಳೂರು, ಗ್ರಾಮಾಂತರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮೈಸೂರು, ಹಾಸನ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಮನಗರ, ದಾವಣಗೆರೆ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ. ದಕ್ಷಿಣ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

RELATED ARTICLES

Latest News