Friday, November 22, 2024
Homeರಾಜ್ಯರಾಜ್ಯದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಸರ್ಕಾರ ಆಕ್ಟಿವ್, ಅಧಿಕಾರಿಗಳ ಜೊತೆ ಸಿಎಂ-ಡಿಸಿಎಂ ಮೀಟಿಂಗ್

ರಾಜ್ಯದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಸರ್ಕಾರ ಆಕ್ಟಿವ್, ಅಧಿಕಾರಿಗಳ ಜೊತೆ ಸಿಎಂ-ಡಿಸಿಎಂ ಮೀಟಿಂಗ್

ಬೆಂಗಳೂರು,ಮೇ 17- ಕರ್ನಾಟಕದ ಎಲ್ಲಾ ಕ್ಷೇತ್ರಗಳಿಗೂ ಲೋಕಸಭಾ ಚುನಾವಣೆ ಪೂರ್ಣಗೊಂಡಿದ್ದರೂ ನೀತಿ ಸಂಹಿತೆ ವಿನಾಯಿತಿಗೊಳ್ಳದ ಕಾರಣ ಆಡಳಿತ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದ್ದು, ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಚುರುಕುಗೊಳಿಸುವ ಸಲುವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ವಿವಿಧ ಯೋಜನೆಗಳ ಪ್ರಗತಿ ಬಗ್ಗೆ ವಿವರಣೆ ನೀಡಿದರು.

ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೃಷಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಘೋಯಲ್‌, ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು ಹಾಜರಿದ್ದು, ಬಜೆಟ್‌ ಯೋಜನೆಗಳ ಪ್ರಗತಿಯ ಕುರಿತು ಮಾಹಿತಿ ನೀಡಿದ್ದಾರೆ.
ಪಂಚಖಾತ್ರಿ ಯೋಜನೆಗಳು ಚಾಲ್ತಿಯಲ್ಲಿವೆ. ಅದೇ ರೀತಿ ರಾಜ್ಯಸರ್ಕಾರ ಯೋಜನಾ ವೆಚ್ಚಕ್ಕೆ 55 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ಚುನಾವಣಾ ನೀತಿ ಸಂಹಿತೆಯ ಕಾರಣಕ್ಕಾಗಿ ಬಹಳಷ್ಟು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರಿಗಳು ಪ್ರತಿಯೊಂದಕ್ಕೂ ನೀತಿ ಸಂಹಿತೆಯ ನೆಪ ಹೇಳುತ್ತಿದ್ದು, ಆಡಳಿತ ವ್ಯವಸ್ಥೆ ದಿಕ್ಕು ತಪ್ಪಿದಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಇಂದಿನ ಸಭೆಯಲ್ಲಿ ಮುಖ್ಯಮಂತ್ರಿಯವರಿಗೆ ವಿವರಣೆ ನೀಡುವ ಮೂಲಕ ಯೋಜನೆಗಳ ಪ್ರಗತಿ ಬಗ್ಗೆ ಚರ್ಚೆ ನಡೆಸಿದರು.

ಬರ ನಿರ್ವಹಣೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಆರ್ಥಿಕ ನೆರವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಮೇವು ಲಭ್ಯತೆ, ಗೋ ಶಾಲೆಗಳ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಸಮಾಲೋಚನೆ ನಡೆಸಿದರು.

ನೀತಿ ಸಂಹಿತೆಯ ನೆಪದಲ್ಲಿ ಆಡಳಿತ ಯಂತ್ರ ತಟಸ್ಥವಾಗುವುದು ಸಹನೀಯವಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸಕಾಲಿಕವಾಗಿ ಸ್ಪಂದಿಸಬೇಕು. ಈಗಾಗಲೇ ಚುನಾವಣೆ ಮುಗಿದಿರುವುದರಿಂದ ಚುನಾವಣಾ ಕರ್ತವ್ಯ ನಿಯೋಜನೆ ಎಂದು ಕಾರಿಗೆ ಬೋರ್ಡ್‌ ಹಾಕಿಕೊಂಡು ತಿರುಗಾಡಿ ಕಾಲಾಹರಣ ಮಾಡುವುದು ಸರಿಯಲ್ಲ. ಸಚಿವರು, ಶಾಸಕರು ಪ್ರಶ್ನಿಸುವುದಿಲ್ಲ ಎಂಬ ಕಾರಣಕ್ಕಾಗಿ ಮನಸೋ ಇಚ್ಛೆ ನಡೆದುಕೊಳ್ಳುವುದನ್ನು ಗಮನಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.

ಕರ್ನಾಟಕದ ಮೇಲೆ ಕೆಂಗಣ್ಣು :
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾ.16 ರಿಂದ ಜೂ.4 ರವರೆಗೂ ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಸರಿಸುಮಾರು 80 ದಿನಗಳ ಕಾಲದ ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳದೇ ದರ್ಬಾರ್‌ ಎಂಬಂತಾಗಿದೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಆಯಾ ರಾಜ್ಯಗಳಲ್ಲಿರುವ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿರುವ ಕಡೆ ನೀತಿ ಸಂಹಿತೆಯನ್ನು ಭಾಗಶಃ ಸಡಿಲಗೊಳಿಸಿದೆ.

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್‌‍ಗಡ, ಗೋವಾ, ಗುಜರಾತ್‌, ಕೇರಳ, ಮಧ್ಯಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ರಾಜಸ್ಥಾನ್‌, ಸಿಕ್ಕಿಂ, ತಮಿಳುನಾಡು, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ.

ಹೀಗಾಗಿ ಅಲ್ಲಿ ಭಾಗಶಃ ನೀತಿ ಸಂಹಿತೆ ಸಡಿಲಗೊಂಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಲೋಕಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಆಡಳಿತಾತಕ ದೃಷ್ಟಿಯಿಂದ ಹಾಗೂ ಬರ ನಿರ್ವಹಣೆ ಕಾರಣಕ್ಕೆ ನೀತಿ ಸಂಹಿತೆಯನ್ನು ಸಡಿಲಿಕೆ ಮಾಡುವಂತೆ ಹಲವು ಸಚಿವರು ಪತ್ರ ಬರೆದಿದ್ದಾರೆ. ಆದರೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಹೀಗಾಗಿ ರಾಜ್ಯದಲ್ಲಿ ಜನಪ್ರತಿನಿಧಿಗಳು ಆಡಳಿತ ವ್ಯವಸ್ಥೆಯಿಂದ ವಿಮುಖರಾಗಿ ನಿಲ್ಲುವಂತಹ ಪರಿಸ್ಥಿತಿ ಬಂದಿದೆ.

ಬಿಸಿತುಪ್ಪವಾದ ಸಿದ್ದರಾಮಯ್ಯ :
ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಸಿ ತುಪ್ಪವಾಗಿದ್ದಾರೆ.ಇಲ್ಲಿ ಜಾರಿಗೊಳ್ಳುವ ಜನಪರ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಚುನಾವಣಾ ಪ್ರಚಾರದಲ್ಲಿ ವ್ಯಾಪಕ ಚರ್ಚೆಗಳಾಗುತ್ತಿವೆ. ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳೂ ಕೂಡ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ವಿಚಾರ ಮಂಥನಕ್ಕೆ ಗ್ರಾಸವಾಗಿವೆ.ಈ ಹಿನ್ನೆಲೆಯಲ್ಲಿ ಕರ್ನಾಟಕದ ಮೇಲೆ ಅನಾಪೇಕ್ಷಣೆಯಾದಂತಹ ಒತ್ತಡಗಳು ಹೆಚ್ಚುತ್ತಲೇ ಇದೆ ಎಂಬ ಆಕ್ಷೇಪಗಳಿವೆ.

RELATED ARTICLES

Latest News