Friday, September 20, 2024
Homeರಾಜ್ಯಪ್ರಜ್ವಲ್‌ ರೇವಣ್ಣನನ್ನು ಕರೆತಂದು ಬಂಧಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ : ಪರಮೇಶ್ವರ್

ಪ್ರಜ್ವಲ್‌ ರೇವಣ್ಣನನ್ನು ಕರೆತಂದು ಬಂಧಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ : ಪರಮೇಶ್ವರ್

ಬೆಂಗಳೂರು,ಮೇ 17- ಪೆನ್‌ಡ್ರೈವ್‌ ಪ್ರಕರಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ವಿದೇಶದಿಂದ ಕರೆತಂದು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾದಳ, ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ, ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳುವುದಿಲ್ಲ, ನಮಗೆ ಇದರ ಅರಿವಿದೆ. ಆದರೆ ನಮಗೂ ಜವಾಬ್ದಾರಿಯಿದೆ. ನಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವೆ ಎಂದರು.

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಕರೆತಂದು ಬಂಧಿಸಿ ಕಾನೂನು ಕ್ರಮ ಜರುಗಿಸುವವರೆಗೂ ಪ್ರಕ್ರಿಯೆಗಳು ಚಾಲನೆಯಲ್ಲಿರುತ್ತವೆ. ಅದು ಯಾವ ಕಾರಣಕ್ಕೂ ನಿಧಾನವಾಗುವುದಿಲ್ಲ. ಇಂತಹ ಪ್ರಕರಣವನ್ನು ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ ಎಂದರು.

ಎಸ್‌‍ಐಟಿಯ ತನಿಖಾ ವರದಿ ಗೃಹಸಚಿವರಿಗಿಂತಲೂ ಮೊದಲೇ ಮಂಡ್ಯದ ಸಂಸದರಿಗೆ ತಲುಪುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಕುಮಾರಸ್ವಾಮಿಯವರಿಗೆ ಆಡಳಿತ ವ್ಯವಸ್ಥೆಯ ಅರಿವಿರುತ್ತದೆ.

ಮಂಡ್ಯ ಶಾಸಕರಿಗೆ ಯಾವ ಅಧಿಕಾರಿ ಬ್ರೀಫಿಂಗ್‌ ಮಾಡುತ್ತಾರೋ? ಗೊತ್ತಿಲ್ಲ. ಸಾಮಾನ್ಯವಾಗಿ ಮುಖ್ಯಮಂತ್ರಿಯವರಿಗೆ ಹಾಗೂ ಗೃಹಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿರುತ್ತಾರೆ. ಕುಮಾರಸ್ವಾಮಿ ಹಾಗೂ ಬಿಜೆಪಿಯ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಾವು ಯಾವುದೇ ಮುಲಾಜಿಗೂ ಒಳಗಾಗದೇ ನಿಸ್ಪಕ್ಷಪಾತ ತನಿಖೆ ನಡೆಸುತ್ತೇವೆ. ತನಿಖೆ ಪ್ರಗತಿಯಲ್ಲಿರುವುದರಿಂದ ಎಲ್ಲಾ ವಿಚಾರವನ್ನು ಬಹಿರಂಗಪಡಿಸುವುದೂ ಕೂಡ ಸೂಕ್ತವಲ್ಲ ಎಂದು ಹೇಳಿದರು.

ಆರೋಪಿ ಬಂಧನ :
ಹುಬ್ಬಳ್ಳಿಯ ಅಂಜಲಿ ಪ್ರಕರಣದಲ್ಲಿ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಇಂತಹ ಕೊಲೆ ಪ್ರಕರಣಗಳಲ್ಲಿ ಯಾವುದೇ ಮುಲಾಜು ನೀಡುವುದಿಲ್ಲ. ಆರೋಪಿಗಳಿಗೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.

ಅಂಜಲಿ ಕುಟುಂಬದ ಸದಸ್ಯರು ಆರೋಪಿಯಿಂದ ಆತಂಕ ಇರುವ ಬಗ್ಗೆ ಪೊಲೀಸ್‌‍ ಅಧಿಕಾರಿಗಳಿಗೆ ಮೌಖಿಕ ಮಾಹಿತಿ ನೀಡಿದ್ದರು. ಲಿಖಿತ ದೂರು ನೀಡಿರಲಿಲ್ಲ ಎಂಬ ವರದಿ ಇದೆ. ಒಂದು ವೇಳೆ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳದೇ ಇದ್ದರೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಮೇಲ್ನೋಟಕ್ಕೆ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್‌ ಸೇರಿದಂತೆ ಕೆಲವರನ್ನು ಅಮಾನತುಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಅಗತ್ಯ ಶಿಸ್ತು ಕ್ರಮವನ್ನೂ ಜರುಗಿಸಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಪದೇಪದೇ ಈ ರೀತಿಯ ಪ್ರಕರಣಗಳು ಘಟಿಸುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಎಡಿಜಿಪಿ ಅವರನ್ನು ಈಗಾಗಲೇ ಹುಬ್ಬಳ್ಳಿಗೆ ಕಳುಹಿಸಲಾಗಿದೆ. ಅವರು ನನಗೆ ವರದಿ ನೀಡಿದ್ದಾರೆ. ಕಾರಣವನ್ನು ಕಂಡುಹಿಡಿಯಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದ. ಸಾಧ್ಯವಾದರೆ ತಾವೂ ಕೂಡ ಹುಬ್ಬಳ್ಳಿಗೆ ಭೇಟಿ ನೀಡುವುದಾಗಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮಳೆಯಾಗಿದೆ. ಆದರೆ ಬರದ ಪರಿಣಾಮ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ ಎಂದರು.

ತಮ ಕೊರಟಗೆರೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಾಗಿದ್ದವರು ನನ್ನ ಜೊತೆ ಫೋಟೊ ತೆಗೆಸಿಕೊಂಡು ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹಲವರಿಂದ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ ಎಂಬ ಆರೋಪಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುವಂತೆ ತಾವು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

RELATED ARTICLES

Latest News