ಬಾರಾಬಂಕಿ,ಮೇ 17- ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸನವರು ಅಧಿಕಾರಕ್ಕೆ ಬಂದರೆ, ಅಯೋಧ್ಯೆಯ ರಾಮಮಂದಿರದ ಮೇಲೆ ಬುಲ್ಡೋಜರ್ ಚಲಾಯಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಮೋದಿ, ಎಸ್‌ಪಿ- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಮ್ ಲಲ್ಲಾ ಮತ್ತೆ ಟೆಂಟ್‌ನಲ್ಲಿರಬೇಕಾಗುತ್ತದೆ. ಎಲ್ಲಿ ಬುಲ್ಡೋಜರ್ ಓಡಿಸಬೇಕು ಮತ್ತು ಎಲ್ಲಿ ಓಡಿಸಬಾರದು ಎಂಬುದನ್ನು ಅವರು ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ಟ್ಯೂಷನ್ ತೆಗೆದುಕೊಳ್ಳಬೇಕು ಎಂದು ಹಾಸ್ಯ ಮಾಡಿದ್ದಾರೆ.
ಯೋಗಿ ಆದಿತ್ಯನಾಥ್ ಅವರನ್ನು ಅವರ ಬೆಂಬಲಿಗರು ಬುಲ್ಡೋಜರ್ ಬಾಬಾ ಎಂದೂ ಕರೆಯುತ್ತಾರೆ, ಏಕೆಂದರೆ ಅವರು ಅಕ್ರಮ ಕಟ್ಟಡಗಳು ಮತ್ತು ಅಪರಾಧಿಗಳು ಮತ್ತು ಗಲಭೆಕೋರರ ಮನೆಗಳನ್ನು ಕೆಡವಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ದೇಶದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಇಂಡಿಯಾ ಮೈತ್ರಿಕೂಟ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಚುನಾವಣೆಗಳು ಮುಂದುವರೆದಂತೆ, ಇಂಡಿಯಾ ಮೈತ್ರಿಕೂಟದ ಸದಸ್ಯರು ಬೇರೆಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಅಸ್ಥಿರತೆಯನ್ನು ಹುಟ್ಟುಹಾಕುವ ಸಲುವಾಗಿ ಇಂಡಿಯಾ ಮೈತ್ರಿಕೂಟವು ಲೋಕಸಭಾ ಚುನಾವಣೆಯ ಕಣದಲ್ಲಿದೆ ಎಂದ ಅವರು, ಸತತ ಮೂರು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ನಮ ಸರ್ಕಾರ ಹ್ಯಾಟ್ರಿಕ್ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.