ಬೆಂಗಳೂರು,ಮೇ17- ಪ್ರಸಕ್ತ ಸಾಲಿನ ಯುಜಿಸಿಇಟಿ ಪರೀಕ್ಷೆ ಬರೆದಿರುವ ಸಿಬಿಎಸ್‌ಸಿ, ಸಿಐಎಸ್‌ಸಿಇ, ಐಜಿಸಿಎಸ್‌ಇ ಮುಂತಾದ ಸಂಸ್ಥೆಗಳಿಂದ 12ನೇ ತರಗತಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಹಾಗೂ ನಾಟಾ ಅಂಕಗಳನ್ನು ಮೇ 20ರೊಳಗಾಗಿ ದಾಖಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ.
ಸಿಬಿಎಸ್‌ಸಿ ಸೇರಿದಂತೆ ವಿವಿಧ ಬೋರ್ಡ್‌ಗಳಲ್ಲಿ ಪ್ರಸಕ್ತ ಸಾಲಿನಲ್ಲಿ 12ನೇ ತರಗತಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳು ಕೆಇಎ ಪೋರ್ಟಲ್‌ಗಳ ಮೂಲಕ ನಿಗದಿತ ಲಿಂಕ್‌ನಲ್ಲಿ ಅಂಕಗಳನ್ನು ದಾಖಲಿಸಲು ಮತ್ತು ಮಾರ್ಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಲು ಸೂಚಿಸಿದೆ.
2024ಕ್ಕಿಂತ ಮೊದಲೇ ಅಂದರೆ ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಮತ್ತು 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಸಹ ಅಂಕಗಳನ್ನು ದಾಖಲಿಸಲು ಸೂಚಿಸಲಾಗಿದೆ.
ಅರ್ಹತಾ ಕಂಡಿಕೆ, ಕ್ಲಾಸ್-ವೈ ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳು ಸಹ ಅಂಕಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಬೇಕಿದೆ. ಕರ್ನಾಟಕದ ದ್ವಿತೀಯ ಪಿಯುಸಿ 2024ರ ಪರೀಕ್ಷೆಯ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳಲಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024 ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆಯ ಅನುಗುಣವಾಗಿ ದಾಖಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್‌ನ್ನು ಸಂಪರ್ಕಿಸಲು ಕೋರಿದೆ.