ಬೆಂಗಳೂರು,ಮೇ18- ಗೊಂದಲದ ಗೂಡಾಗಿ ಪರಿಣಮಿಸಿರುವ ಪ್ರಾಥಮಿಕ ಶಿಕ್ಷಣ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಹಾಗೂ ಇದಕ್ಕೆ ಅರ್ಹತೆ ಇರುವ ಯೋಗ್ಯರನ್ನು ನೇಮಕ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ತಮ್ಮ ಅಧಿಕೃತ ಜಾಲತಾಣ ಖಾತೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಭವಿಷ್ಯತ್ತಿನಲ್ಲಿ ನಾಡು, ದೇಶ ಕಟ್ಟುವ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳಲ್ಪಡುತ್ತಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯನ್ನು ಸರಿದಾರಿಗೆ ತರುವ ಕಟ್ಟುನಿಟ್ಟಿನ ಕ್ರಮ ವಹಿಸಲಿ. ಶಿಕ್ಷಣ ಬದ್ಧತೆ ಇದ್ದವರ ಕೈಗೆ ಇಲಾಖೆಯ ಸಾರಥ್ಯ ವಹಿಸಿಕೊಡಲಿ ಎಂದು ಸಲಹೆ ಮಾಡಿದ್ದಾರೆ.
ಪ್ರಾಥಮಿಕ ಶಿಕ್ಷಣವೆಂದರೆ ಕೇವಲ ಅಕ್ಷರ ಕಲಿಕೆಯಲ್ಲ. ನಾಳಿನ ಪ್ರಜೆಗಳ ಭವಿಷ್ಯ ರೂಪಿಸುವ ನೈಜ ಅಡಿಪಾಯ. ಒಂದು ಸರ್ಕಾರ ಶಿಕ್ಷಣವನ್ನು ಆಲಕ್ಷಿಸಿದರೆ ದೇಶದ ಭವಿಷ್ಯವನ್ನು ಗಂಡಾಂತರಕ್ಕೆ ತಳ್ಳುವ ನೀಚ ಪ್ರವೃತ್ತಿಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಇಂತಹ ಪ್ರವೃತ್ತಿ ಮೇಳೈಸುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಅರಾಜಕತೆಯತ್ತ ಸಾಗಿದೆ, ಇದನ್ನು ಮುಖ್ಯಮಂತ್ರಿಗಳು ಇಂದು ಒಪ್ಪಿಕೊಂಡು ಕೃಪಾಂಕ ನೀಡುವಷ್ಟು ತಳಮಟ್ಟಕ್ಕೆ ಕುಸಿದಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಗ್ಗೆ ಅಸಹಾಯಕತೆಯಿಂದ ಕೋಪೋದ್ರಿಕ್ತರಾಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ದಿಕ್ಕಿಲ್ಲದ ಹಡಗಿನಂತೆ ಸಾಗಿದೆ ತಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡಿರುವ ಲಕ್ಷಾಂತರ ಪೋಷಕರ ಆತಂಕದ ಪ್ರಶ್ನೆಗಳಿಗೆ ಉತ್ತರಿಸುವವರಿಲ್ಲದೆ ಅವರ ವೇದನೆ ಅರಣ್ಯರೋದನವಾಗಿದೆ ಎಂದು ಬೇಸರಿಸಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬದಿಗೆ ಸರಿಸುವ ವಿದ್ವತ್ತು ಪ್ರದರ್ಶಿಸಲು ಹೋಗಿ ನೈಜ ಶಿಕ್ಷಣ ವ್ಯವಸ್ಥೆಯನ್ನು ದಮನ ಮಾಡಲು ಹೊರಟ ಸರ್ಕಾರ, ಚಾಲನೆಯ ಅನುಭವವಿಲ್ಲದ ಚಾಲಕನೊಬ್ಬ ವಾಹನ ಅಥವಾ ರೈಲು ಮುನ್ನಡೆಸಿದರೆ ಯಾವ ಸ್ಥಿತಿ ಉಂಟಾಗಬಹುದು ಅಂಥದ್ದೇ ಸ್ಥಿತಿ ಇಂದು ರಾಜ್ಯದ ಪ್ರಾಥಮಿಕ ಹಾಗೂ ಶಿಕ್ಷಣ ಇಲಾಖೆಗೆ ಬಂದೊದಗಿದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ವಿದ್ಯಾ ಇಲಾಖೆಯನ್ನು ವಿಧೇಯತೆ ಗೊತ್ತಿಲ್ಲದವರ ಕೈಗೆ ಒಪ್ಪಿಸಿದ್ದ ಕಾರಣಕ್ಕಾಗಿ ಇಂದು ಅವರೇ ಪಶ್ಚಾತ್ತಾಪ ಪಡುವಂತಹ ಪರಿಸ್ಥಿತಿ ಉದ್ಭವಿಸಿದೆ ಎಂದಿರುವ ಅವರು, ಮೇಟಿ ವಿದ್ಯೆಗೆ ರೈತ, ಅಕ್ಷರ ವಿದ್ಯೆಗೆ ವಿನಯವಂತನಿದ್ದರೆ ಕೃಷಿ-ಶಿಕ್ಷಣ ಎರಡೂ ಸಮೃದ್ಧವಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.