ಬೆಂಗಳೂರು,ಮೇ18- ಕರ್ನಾಟಕದಲ್ಲಿ ಮತ್ತೆ ಮದ್ಯದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಕತ್ತರಿ ಬೀಳುವ ಲಕ್ಷಣಗಳು ಗೋಚರಿಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ರಾಜ್ಯ ಸರ್ಕಾರವು ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಮತ್ತೊಮೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಇದರ ಪರಿಣಾಮವಾಗಿ ಪ್ರತಿ 650 ಮಿಲಿ ಬಾಟಲಿಗೆ 8-10 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಸ್ಪ್ಯಾಬ್‌ಗಳ ಅಗ್ಗದ ಮದ್ಯಗಳ ಬೆಲೆ ತುಂಬಾ ಕಡಿಮೆಯಿದೆ. ರಾಜ್ಯದಲ್ಲಿ ಸೆಮಿ ಪ್ರೀಮಿಯಂ ಹಾಗೂ ಪ್ರೀಮಿಯಂ ವಿದೇಶಿ ಮದ್ಯಕ್ಕೆ ಹೋಲಿಸಿದರೆ ಅಗ್ಗದ ಬೆಲೆಯ ಮದ್ಯಗಳ ಮಾರಾಟ ಹೆಚ್ಚಿದೆ. ಹೀಗಾಗಿ ಸರ್ಕಾರ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ.
ಕಾಂಗ್ರೆಸ್ ತನ್ನ ಐದು ಭರವಸೆಗಳನ್ನು ಈಡೇರಿಸಲು ಈ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿವೆ. ಕರಡು ಅಧಿಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ತಯಾರಿಸಲಾದ ಅಥವಾ ರಾಜ್ಯಕ್ಕೆ ಆಮದು ಮಾಡಿಕೊಳ್ಳುವ ಬಾಟಲಿಯ ಬಿಯರ್‌ನ ಮೇಲೆ ಎಇಡಿಯನ್ನು ಶೇಕಡಾ 185ರಿಂದ ಶೇಕಡಾ 195ಕ್ಕೆ ಶೇ.10ರಷ್ಟು ಹೆಚ್ಚಿಸಲಾಗುವುದು. ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಮದ್ಯದ ಬೆಲೆಯಲ್ಲಿ ಏರಿಕೆಯಾಗಲಿದೆ.
ಕಳೆದ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾರತೀಯ ತಯಾರಿಕಾ ಮದ್ಯದ ಮೇಲೆ ಶೇ.20ರಷ್ಟು ಮತ್ತು ಬಿಯರ್ ಮೇಲೆ ಶೇ.175ರಿಂದ ಶೇ.185ಕ್ಕೆ ಎಇಡಿ ಹೆಚ್ಚಿಸಿದ್ದರು. ರಾಜ್ಯ ಸರಕಾರಕ್ಕೆ ಅಬಕಾರಿ ಆದಾಯವೇ ನಿರ್ಣಾಯಕ. 2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕವು ಅಬಕಾರಿಯಿಂದ 36,000 ಕೋಟಿ ರೂ.ಆದಾಯ ಗಳಿಸುವ ಗುರಿ ಹೊಂದಿದೆ. ಹೊರ ರಾಜ್ಯಗಳಲ್ಲಿ ದುಬಾರಿ ಬೆಲೆಯ ಮದ್ಯಗಳ ಬೆಲೆ ಕರ್ನಾಟಕಕ್ಕಿಂತಲೂ ಕಡಿಮೆ ಇದೆ. ಈ ಮದ್ಯಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಇವುಗಳ ಬೆಲೆಯನ್ನು ಇಳಿಕೆ ಮಾಡಲಿದೆ.
ಆರರಿಂದ 12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿ ಶೇ.10ರಷ್ಟು, 12ರಿಂದ 18ನೇ ಸ್ಪ್ಯಾಬ್‌ವರೆಗಿನ ವಿದೇಶಿ ಅಥವಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಶೇ.12ರಿಂದ 15ರಷ್ಟು ಇಳಿಕೆ ಮಾಡುವ ಸಾಧ್ಯತೆಯಿದೆ. ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿ ಮಾಡಲಾಗುತ್ತದೆ.
2023ರ ವಿಧಾನಸಭಾ ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರ ಮೂರು ಬಾರಿ ಬಿಯರ್ ದರ ಹೆಚ್ಚಳ ಮಾಡಿದೆ. ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ನಂತರ ಬಿಯರ್ ಉತ್ಪಾದಕ ಕಂಪನಿಗಳು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಾಟಲ್ ಮೇಲೆ ಕನಿಷ್ಠ 10 ರೂ.ವರೆಗೆ ದರ ಹೆಚ್ಚಿಸಿದ್ದವು.
ಅದರ ಬೆನ್ನಲ್ಲೇ ಸರಕಾರ ಫೆ.1ರಿಂದ ಜಾರಿಗೆ ಬರುವಂತೆ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ.185ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ಎಇಡಿ ಶೇ.10ರಷ್ಟು ಹೆಚ್ಚಳವಾಗಿತ್ತು.
ಎಇಡಿ ಏರಿಕೆಯಿಂದಾಗಿ ಪ್ರತಿ ಬಾಟಲಿ ಬಿಯರ್ ದರವು ಬ್ರ್ಯಾಂಡ್‌ಗಳ ಆಧಾರದಲ್ಲಿ ಕನಿಷ್ಠ 8 ರೂ.ಗಳಿಂದ ಗರಿಷ್ಠ 15 ರೂ.ವರೆಗೆ ಹೆಚ್ಚಳವಾಗಿತ್ತು. ಸಾಮಾನ್ಯ ಬ್ರ್ಯಾಂಡ್‌ಗಳಿಂದ ಪ್ರೀಮಿಯಂ ಬ್ರ್ಯಾಂಡ್‌ಗಳವರೆಗೆ ಎಲ್ಲಾ ಬಗೆಯ ಬಿಯರ್ ದರ ಏರಿಕೆಯಾಗಿತ್ತು. ಇದರೊಂದಿಗೆ ಕಳೆದ ಏಳೆಂಟು ತಿಂಗಳ ಅವಧಿಯಲ್ಲಿ ಬಿಯರ್ ಬೆಲೆ ಪ್ರತಿ ಬಾಟಲ್‌ಗೆ ಸುಮಾರು 40 ರೂ.ವರೆಗೆ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಮದ್ಯದ ಬ್ರ್ಯಾಂಡ್‌ಗಳನ್ನು ಬೆಲೆಯ ಅನುಸಾರ 18 ಸ್ಪ್ಯಾಬ್‌ಗಳಾಗಿ ವಿಂಗಡಿಸಲಾಗಿದೆ. ಒಂದರಿಂದ ಐದನೇ ಸ್ಪ್ಯಾಬ್‌ವರೆಗಿನ ಮದ್ಯಗಳ ಮಾರಾಟದಿಂದ ಶೇ.75ರಷ್ಟು ಆದಾಯ ಬರುತ್ತದೆ. 6ರಿಂದ 12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ.20ರಷ್ಟು ಮತ್ತು 1ರಿಂದ 18ರವರೆಗಿನ ಸ್ಪ್ಯಾಬ್‌ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ.5ರಷ್ಟು ಆದಾಯ ಬರುತ್ತದೆ. ಆದಾಯದ ಲೆಕ್ಕಾಚಾರದಲ್ಲೇ ಸರಕಾರ 2ರಿಂದ 5ನೇ ಸ್ಪ್ಯಾಬ್‌ವರೆಗಿನ ಮದ್ಯಗಳ ಬೆಲೆಯನ್ನು ಶೇ.7ರಿಂದ 8ರಷ್ಟು ಹೆಚ್ಚಳ ಮಾಡಲಿದೆ.
ಚುನಾವಣೆ ಬಳಿಕ ಏರಿಕೆ:
ರಾಜ್ಯದಲ್ಲಿ 2023ರ ಜುಲೈನಲ್ಲಿ ದೇಶೀಯ ಮದ್ಯಗಳ ಬೆಲೆ ಹೆಚ್ಚಿಸಲಾಗಿತ್ತು. ಆ ನಂತರ ಬೆಲೆ ಪರಿಷ್ಕರಣೆ ಮಾಡಿಲ್ಲ. ನೆರೆಯ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ಕರ್ನಾಟಕದಲ್ಲೂ ದೇಶೀಯ ಮದ್ಯದ ಬೆಲೆ ಪರಿಷ್ಕರಿಸುವುದಾಗಿ ಸರಕಾರ ಬಜೆಟ್‌ನಲ್ಲೇ ಘೋಷಿಸಿತ್ತು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಿರಲಿಲ್ಲ. ಚುನಾವಣೆ ಅಂತ್ಯಗೊಂಡ ಬಳಿಕ ದೇಶೀಯ ಮದ್ಯಗಳ ಬೆಲೆ ಏರಿಕೆಯಾಗಲಿದೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಈಗಿನ ದರ – ಹೆಚ್ಳಳ ಸಾಧ್ಯತೆ
ಮೊದಲನೇ ಸ್ಪ್ಯಾಬ್
63.14 ರೂ. -ಹೆಚ್ಚಳ ಸಾಧ್ಯತೆಯಿಲ್ಲ
ಎರಡನೇ ಸ್ಪ್ಯಾಬ್
80ರೂ.ನ ಬ್ರಾಂಡ್ -ತಲಾ 5 ರೂ. ಹೆಚ್ಚಳ
ಮೂರನೇ ಸ್ಪ್ಯಾಬ್
99.50 ರೂ. – 105 ರೂ.
ನಾಲ್ಕನೇ ಸ್ಪ್ಯಾಬ್
122.50 ರೂ – 130 ರೂ.