ನವದೆಹಲಿ,ಮೇ18- ತೀವ್ರ ಸಂಚಲನ ಸೃಷ್ಟಿಸಿದ್ದ ರಾಜ್ಯ ಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್‌ಕುಮಾರ್ ಅವರನ್ನು ಕೊನೆಗೂ ಬಂಧಿಸಲಾಗಿದೆ.
ಪ್ರಕರಣ ನಡೆದು ಒಂದು ವಾರದ ನಂತರವೂ ಬಿಭವ್‌ಕುಮಾರ್ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಆಪ್ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ನಿವಾಸದಲ್ಲಿದ್ದ ಬಿಭವ್‌ಕುಮಾರ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ತಮ ವಶಕ್ಕೆ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
ಕೇಜ್ರಿವಾಲ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಭವ್ ಕುಮಾರ್ ತಮ ಪಕ್ಷದ ಸಂಸದೆಯಾಗಿರುವ ಸ್ವಾತಿ ಮಾಲಿವಾಲ್ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಕೇಜ್ರಿವಾಲ್ ನಿವಾಸದಲ್ಲಿ ಹಲವು ಮುಖಂಡರ ಎದುರೇ ನನ್ನ ಮುಖಕ್ಕೆ ಗುದ್ದಿ, ಎದೆಗೆ ಒದ್ದು, ಕಪಾಳಮೋಕ್ಷ ಮಾಡಿದ್ದಾರೆ. ಪಕ್ಷದ ಹಲವು ಮುಖಂಡರು ಎದುರಿನಲ್ಲೇ ಇದ್ದರೂ ಯಾರೊಬ್ಬರೂ ನನ್ನ ರಕ್ಷಣೆಗೆ ಬರಲಿಲ್ಲ ಎಂದು ಆರೋಪಿಸಿದರು. ಇದು ರಾಜಕೀಯ ವಲಯದಲ್ಲಿ ಸುಂಟರ ಗಾಳಿಯನ್ನೇ ಎಬ್ಬಿಸಿತ್ತು. ಬಿಭವ್‌ಕುಮಾರ್ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಖುದ್ದು ಸ್ವಾತಿ ಮಾಲಿವಾಲ್ ದೂರು ನೀಡಿದ್ದರು.
ಇದೀಗ ವೈದ್ಯಕೀಯ ವರದಿಯಲ್ಲಿ ಸ್ವಾತಿ ಮಾಲಿವಾಲ್ ಮೇಲೆ ಹಲ್ಲೆ ನಡೆದಿರುವುದು ಸಾಬೀತಾಗಿದೆ. ಅವರ ಎಡಗಾಲು, ಎದೆಭಾಗ, ಮೂಗಿನ ಬಳಿ ಹಲ್ಲೆಯಾಗಿರುವುದು ವೈದ್ಯಕೀಯ ವರದಿಯಲ್ಲಿ ಕಂಡುಬಂದಿದೆ.
ದೂರು ದಾಖಲಿಸಿದ್ದ ಸ್ವಾತಿ ಮಾಲಿವಾಲ್ , ನನಗೆ ಬಿಭವ್‌ಕುಮಾರ್ 7ರಿಂದ 8 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಬಲಗಣ್ಣು, ಕತ್ತಿನ ಕೆಳಗೆ, ಮೊಣಕೈ ಮೇಲೂ ಹಲ್ಲೆಯಾಗಿದೆ. ಇದು ಏಮ್ಸೌ ವೈದ್ಯಕೀಯ ವರದಿಯಲ್ಲೂ ಸಾಬೀತಾಗಿದೆ. ನ್ಯಾಯ ಒದಗಿಸಿಕೊಡಬೇಕಾದವರೇ ಮೂಕಪ್ರೇಕ್ಷಕರಾಗಿದ್ದರು ಎಂದು ಆಪಾದಿಸಿದ್ದರು.ಈ ಪ್ರಕರಣದ ನಂತರ ಆಪ್ ಮತ್ತು ಬಿಜೆಪಿ ನಡುವೆ ಭಾರೀ ವಾಕ್ ಸಮರ ನಡೆದಿತ್ತು.
ಇದು ಲೋಕಸಭೆ ಚುನಾವಣೆಯಲ್ಲಿ ನಮ ಪಕ್ಷಕ್ಕೆ ಮಸಿ ಬಳಿಯುವ ಪ್ರಯತ್ನ. ಬಿಜೆಪಿ ನಡೆಸಿರುವ ವ್ಯವಸ್ಥಿತ ರಾಜಕೀಯ ಕುತಂತ್ರ ಎಂಬುದು ಎಎಪಿಯ ಪ್ರತ್ಯಾರೋಪವಾಗಿತ್ತು.ಇದಕ್ಕೆ ತಿರುಗೇಟು ಕೊಟ್ಟಿದ್ದ ಬಿಜೆಪಿ ತನ್ನ ಪಕ್ಷದ ಸಂಸದೆಗೆ ರಕ್ಷಣೆ ನೀಡದ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷದ ಮುಖಂಡರು ಬೇರೆಯವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಅದರಲ್ಲೂ ಘಟನೆ ನಡೆದಿರುವುದು ಮುಖ್ಯಮಂತ್ರಿಗಳ ನಿವಾಸದಲ್ಲಿ.
ಒಬ್ಬ ಜನಪ್ರತಿನಿಧಿಗೆ ರಕ್ಷಣೆ ಕೊಡಲು ಸಾಧ್ಯವಾಗದವರು ಬೇರೆಯವರಿಗೆ ಇನ್ನೇನು ಉಪದೇಶ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿರುಗೇಟು ಕೊಟ್ಟಿದ್ದರು.
ಈಗ ದೆಹಲಿ ಪೊಲೀಸರು ಬಿಭವ್‌ಕುಮಾರ್‌ರನ್ನು ಬಂಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ.ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ಇದೇ 25ರಂದು ಮತದಾನ ನಡೆಯಲಿದೆ. ಚುನಾವಣಾ ಸಂದರ್ಭದಲ್ಲೇ ಈ ಪ್ರಕರಣ ನಡೆದಿರುವುದರಿಂದ ಆಡಳಿತಾರೂಢ ಎಎಪಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ.