ಬೆಂಗಳೂರು, ಮೇ 19- ರಾಜಧಾನಿ ಸೇರಿದಂತೆ ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಮೇ.23 ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಾಗಡಿ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ಮೈಸೂರು ಸೇರಿದಂತೆ ವಿವಿಧೆಡೆ ಮಳೆಯಾಗುತ್ತಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ವಿವಿಧೆಡೆ ಮಳೆಯಾಗಿದೆ. ಇಂದು ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆಯಿದೆ.
ಬಿಸಿಲ ಬೇಗೆಯಿಂದ ಬಳಲುತ್ತಿದ್ದ ರಾಜ್ಯದ ಜನತೆಗೆ ವರುಣನ ಆಗಮನದಿಂದ ತುಸು ತಂಪೆರೆದಿದ್ದು, ನಿಟ್ಟುಸಿರು ಬಿಡುವಂತಾಗಿದೆ. ತೀವ್ರ ಬರಗಾಲದಿಂದ ಅನ್ನದಾತರು ಕಂಗಾಲಾಗಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಈ ಮಧ್ಯೆ ಮಳೆಯ ಆಗಮನವಾಗಿದ್ದು, ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ನೀರಿನ ಅಭಾವ ಹಾಗೂ ಹೆಚ್ಚಿದ ಉಷ್ಣಾಂಶದಿಂದ ತರಕಾರಿಗಳ ಇಳುವರಿ ಕುಂಠಿತವಾಗಿ ಬೆಲೆ ಗಗನಕ್ಕೇರಿದ್ದು, ಇನ್ನೂ ಒಂದು ತಿಂಗಳು ಇದೇ ಬೆಲೆ ಮುಂದುವರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೇ ರೀತಿ ಮಳೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬೆಳೆ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.