ಬೆಂಗಳೂರು,ಡಿ.27- ಮೈಸೂರು ಅರಮನೆ ಮುಂಭಾಗ ಬಲೂನಿಗೆ ಅನಿಲ ತುಂಬುವ ಸಿಲಿಂಡರ್‌ಗೆ ಹೀಲಿಯಂ ಅನಿಲಕ್ಕೆ ಬದಲಾಗಿ ಹೈಡ್ರೋಜನ್ ಅನಿಲ ಬಳಸಿರುವುದರಿಂದ ಸ್ಫೋಟಗೊಂಡಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ ಅವರು ತಿಳಿಸಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ತನಿಖೆಯಿಂದ ಈ ಅಂಶ ಕಂಡುಬಂದಿದೆ. ಹೀಲಿಯಂ ಅನಿಲದ ಬೆಲೆ ದುಬಾರಿ. ಹಾಗಾಗಿ ಕಡಿಮೆ ಬೆಲೆಯ ಹೈಡ್ರೋಜನ್ ಅನಿಲ ಬಳಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಬಲೂನ್‌ಗೆ ಗ್ಯಾಸ್ ತುಂಬಲು ಹೆಚ್ಚು ಒತ್ತಡ ಹಾಕಿದ್ದರಿಂದ ಸ್ಫೋಟಗೊಂಡು ದುರಂತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಸ್ಫೋಟದ ರಭಸಕ್ಕೆ ಸಿಲಿಂಡರ್ ಒಡೆದುಕೊಂಡು ಚೂರು ಚೂರುಗಳಾಗಿ ಸಿಡಿದಿರುವುದರಿಂದ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಬಲೂನ್ ಮಾರುವ ಸಲೀಂ ಬಗ್ಗೆಯೂ ಸಹ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದೇವೆ. ಕೇಂದ್ರ ತನಿಖಾ ಸಂಸ್ಥೆಗಳು ಸಹ ಸ್ಥಳಕ್ಕೆ ಬಂದು ಹಲವು ಅವಶೇಷಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿವೆ ಎಂದು ಅವರು ತಿಳಿಸಿದರು.ಘಟನೆಯಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿತೇಂದ್ರ ಅವರು ಹೇಳಿದರು.
