ಇಸ್ಲಾಮಾಬಾದ್,ಮೇ19- ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ತಾನದಿಂದ ಆಮದಾಗುವ ವಸ್ತುಗಳ ಮೇಲೆ ಭಾರತ ಭಾರೀ ಸುಂಕ ವಿಧಿಸುತ್ತಿರುವುದರಿಂದಾಗಿ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು 2019ರಿಂದ ಅಮಾನತಗೊಂಡಿದೆ ಎಂದು ಪಾಕ್ ವಿದೇಶಾಂಗ ಸಚಿವ ಇಶಾಖ್‌ದರ್ ಹೇಳಿದ್ದಾರೆ.
ಪಾಕಿಸ್ತಾನದಿಂದ ಆಮದಾಗುವ ಸರಕುಗಳಿಗೆ ಶೇ.200ರಷ್ಟು ಸುಂಕವನ್ನು ವಿಧಿಸಲು ಭಾರತ ನಿರ್ಧರಿಸಿದೆ. ಪುಲ್ವಾಮಾ ದಾಳಿಯ ಬಳಿಕ ಕಾಶೀರಕ್ಕೆ ಬಸ್ ಸಂಚಾರ ಮತ್ತು ನಿಯಂತ್ರಣ ರೇಖೆಗುಂಟ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ ಎಂದು ಪಾಕಿಸ್ತಾನದ ಉಪಪ್ರಧಾನಿಯೂ ಆಗಿರುವ ಇಶಾಖ್ ಅವರು ಶನಿವಾರ ರಾಷ್ಟ್ರೀಯ ಅಸೆಂಬ್ಲಿಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ತಿಳಿಸಿದರು.
ನೆರೆ ರಾಷ್ಟ್ರಗಳೊಂದಿಗೆ ವಿಶೇಷವಾಗಿ ಭಾರತದೊಂದಿಗೆ ಪಾಕಿಸ್ತಾನವು ವ್ಯಾಪಾರ ಸಂಬಂಧಗಳಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ವಿವರ ನೀಡುವಂತೆ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸದಸ್ಯೆ ಶರ್ಮಿಳಾ ಫಾರೂಖಿ ಅವರು ಕೇಳಿದ ಪ್ರಶ್ನೆಗೆ ಇಶಾಕ್ ದರ್ ಈ ಉತ್ತರ ನೀಡಿದರು ಎಂದು ಡಾನ್ ವಾರ್ತಾಪತ್ರಿಕೆ ವರದಿ ಮಾಡಿದೆ.