ಜೈಪುರ,ಮೇ19- 14 ವರ್ಷದ ಬಾಲಕಿಯನ್ನು ಕಲ್ಲಿದ್ದಲು ಕುಲುಮೆಯಲ್ಲಿ ಎಸೆದು ಕೊಂದು ಹಾಕಿದ್ದ ಪ್ರಕರಣ ಸಂಬಂಧ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಪೋಕ್ಸೊನ್ಯಾಯಾಲಯ ಇಬ್ಬರು ಆರೋಪಿಗಳನ್ನು ದೋಷಿ ಎಂದು ತೀರ್ಪು ನೀಡಿದೆ.
ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದ ಆರೋಪದಲ್ಲಿ ಕಲು ಮತ್ತು ಕನ್ಹಾ ತಪ್ಪಿತಸ್ಥರೆಂದು ನ್ಯಾಯಾಲಯ ಇಂದು ತೀರ್ಪು ನೀಡಿದ್ದು, ಅಪರಾಧಿಗಳಿಗೆ ನಾಳೆ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮಹಾವೀರ್ ಸಿಂಗ್ ಕಿಷ್ನಾವತ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪ ಹೊತ್ತಿರುವ ಇತರ ಏಳು ಆರೋಪಿಗಳನ್ನೂ ನ್ಯಾಯಾಲಯ ಖುಲಾಸೆಗೊಳಿಸಿದ್ದು, ಇವರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಟ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕಿಯನ್ನು ಕೊಲೆ ಮಾಡಿ ಕಲ್ಲಿದ್ದಲು ಕುಲುಮೆಯಲ್ಲಿ ಎಸೆಯಲಾಗಿತ್ತು. ಘಟನೆ ಸಂಬಂಧ ಕುಲುಮೆಗಳಲ್ಲಿ ಕಲ್ಲಿದ್ದಲು ತಯಾರಿಕೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸಾಮೂಹಿಕ ಅತ್ಯಾಚಾರದ ನಂತರ, ಸಂತ್ರಸ್ತೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ, ಆರೋಪಿಗಳು ಅವಳನ್ನು ಕುಲುಮೆಗೆ ಎಸೆದಿದ್ದರು. ಫೋರೆನ್ಸಿಕ್ ವರದಿಯಲ್ಲಿ ಬಾಲಕಿಯನ್ನು ಎಸೆಯುವಾಗ ಜೀವಂತವಾಗಿದ್ದಳು. ಸುಟ್ಟ ಗಾಯಗಳಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿತ್ತು.