Sunday, December 28, 2025
Homeಬೆಂಗಳೂರುಡಿ.31ರಂದು ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

ಡಿ.31ರಂದು ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

Public entry banned to Nandi Hills on December 31

-ಎಂ.ಕೃಷ್ಣಪ್ಪ,ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ, ಡಿ.28- ಹೊಸ ವರ್ಷದ ಸ್ವಾಗತಕ್ಕೆ ಇಡೀ ರಾಜ್ಯವೇ ಸಜ್ಜಾಗುತ್ತಿದೆ. ಇತ್ತ ಹೊಸ ವರ್ಷದ ಆಚರಣೆ ನೆಪದಲ್ಲಿ ನಡೆಯುವ ಮೋಜು-ಮಸ್ತಿ, ಅನಾಹುತ ತಪ್ಪಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ದಕ್ಷಿಣ ಭಾರತದ ಬೇಸಿಗೆ ಗಿರಿಧಾಮ, ಬಡವರ ಊಟಿ ಎಂದೇ ಖ್ಯಾತಿ ಪಡೆದ ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಈ ಬಾರಿಯೂ ಪ್ರವೇಶ ನಿಷೇಧಿಸಿರುವುದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಪೊಲೀಸ್‌‍ ಇಲಾಖೆಯು ಹೊಸ ವರ್ಷದ ಹಿಂದಿನ ದಿನ ಅಂದರೆ ಡಿ.31ರಂದು ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆಈ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿ ಡಿ.31 ಮಧ್ಯಾಹ್ನದಿಂದ ಜ.1ರ ಮಧ್ಯಾಹ್ನದವರೆಗೆ ಈ ನಿಷೇಧ ಜಾರಿಯಲ್ಲಿದ್ದು, ಪಾನಮತ್ತರಾಗಿ ವಾಹನ ಚಾಲನೆ ಮಾಡುವುದು ಮತ್ತು ಬೆಟ್ಟದ ಕಡಿದಾದ ರಸ್ತೆಗಳಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಗಟ್ಟಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ನಂದಿಬೆಟ್ಟದ ಸುತ್ತಮುತ್ತ ಇರುವ ಹೋಟೆಲ್‌ಗಳು, ಹೋಮ್‌ಸ್ಟೇಗಳು ಮತ್ತು ರೆಸಾರ್ಟ್‌ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮೋಜು-ಮಸ್ತಿಯ ಹೆಸರಿನಲ್ಲಿ ಕಾನೂನು ಕಡೆಗಣಿಸಿ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಟ್ಟುನಿಟ್ಟಿನ ಪ್ರಕರಣ ದಾಖಲಿಸಲು ಪೊಲೀಸರು ಸನ್ನದ್ಧರಾಗಿದ್ದು , ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಜಿಲ್ಲಾಡಳಿತ ಹಾಗೂ ಪೊಲೀಸರ ಸೂಚನೆಯಂತೆ ಸಮಯಕ್ಕೆ ಸರಿಯಾಗಿ ಬಂದ್‌ ಮಾಡುವಂತೆ ಆದೇಶಿಸಲಾಗಿದೆ.

ಇಶಾ ಫೌಂಡೇಶನ್‌(ಆದಿಯೋಗಿ), ನಂದಿಬೆಟ್ಟದ ತಪ್ಪಲಿನ ಕಣಿವೆ ಬಸವ, ನಂದಿಯ ಶ್ರೀ ಭೋಗನಂದೀಶ್ವರ, ಶ್ರೀ ರಂಗಸ್ಥಳದ ರಂಗನಾಥ ಸ್ವಾಮಿ ದೇಗುಲಕ್ಕೂ ಸಾವಿರಾರು ಭಕ್ತರು ಬರುವ ನಿರೀಕ್ಷೆಯಿದ್ದು, ಜಿಲ್ಲಾ ಪೊಲೀಸ್‌‍ ಇಲಾಖೆ ಹೆಚ್ಚಿನ ಪೊಲೀಸ್‌‍ ಬಂದೋಬಸ್ತ್‌ ಮಾಡಿದೆ.

ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ ಸಾವಿರಾರು ಪ್ರವಾಸಿಗರು ಬೆಳ್ಳಂಬೆಳಿಗ್ಗೆ ಸಾಲು ಸಾಲು ರಜೆ ಹಾಗೂ ಡಿಸೆಂಬರ್‌ ಕೊನೆ ವಿಕೆಂಡ್‌ ದಿನವಾದ ಇಂದು ನಾ ಮುಂದು ತಾ ಮುಂದು ಎಂದು ನಂದಿಗಿರಿಧಾಮದ ಸನ್‌ ರೈಸ್‌‍ ನೋಡಿ ಮಸ್ತ್‌ ಖುಷಿ ಪಟ್ಟರು ಅದರಂತೆ ಇಲ್ಲಿನ ಮಯೂರು ಫೈನ್‌ಟಾಪ್‌, ಸನ್‌ ಪಾಯಿಂಟ್‌ನಲ್ಲಿ ಸನ್‌ರೈಸ್‌‍ ನೋಡಿ ಸಂಭ್ರಮಿಸಿದರು.

ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೆಕ್ಕಿ ಪ್ರವಾಸಿಗರೆ ಚುಮು-ಚುಮು ಚಳಿಯನ್ನು ಲೆಕ್ಕಿಸದೆ ನಂದಿಗಿರಿಯಲ್ಲಿ ಸೆಲ್ಫಿ ತೆಗೆದುಕೊಂಡರು. ಅದರಲ್ಲೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜಿಲ್ಲಾಡಳಿತ, ಪೊಲೀಸ್‌‍ ಇಲಾಖೆಯ ಆದೇಶಗಳನ್ನು ಪರಿಪಾಲನೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಕುಶಲ್‌ ಚೌಕ್ಸೆ ತಿಳಿಸಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ. ಇವೆಲ್ಲದರ ಆದೇಶ ಪಾಲಿಸಿಕೊಂಡು ಮುನ್ನಡೆಯುವುದು ನಮೆಲ್ಲರ ಕರ್ತವ್ಯವೂ ಕೂಡ ಆಗಿದೆ ಎಂದರು.

RELATED ARTICLES

Latest News