ಬೆಂಗಳೂರು, ಮಾ 21- ಪ್ರಸಕ್ತ ಲೋಕಸಭಾ ಚುನಾವಣೆ ನಂತರ ಒಂದರ ಹಿಂದೆ ಮತ್ತೊಂದು ಎಂಬಂತೆ ಚುನಾವಣೆ ಸರಣಿ ಆರಂಭವಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ನಿರಂತರವಾಗಿ ಮುಂದುವರೆಯುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಲಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ವಿಧಾನಪರಿಷತ್‌ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ 6 ಸ್ಥಾನಗಳಿಗೆ ಜೂ.3ರಂದು ಮತದಾನ ನಡೆಯಲಿದೆ.
ಇದಲ್ಲದೆ, ವಿಧಾನಸಭಾ ಸದಸ್ಯರಿಂದ ವಿಧಾನಪರಿಷತ್‌ನ 11 ಸದಸ್ಯ ಸ್ಥಾನಗಳಿಗೆ ಜೂ.13 ರಂದು ಮತ್ತೊಂದು ಚುನಾವಣೆ ಎದುರಾಗಿದೆ. ಈ ಚುನಾವಣೆಗಳು ಮುಗಿಯುತ್ತಿದ್ದಂತೆ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಎದುರಾಗುವ ಸಾಧ್ಯತೆಗಳಿವೆ.
ವಿಧಾನಪರಿಷತ್‌ನ 3 ಪದವೀಧರ, 3 ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ 78 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದ್ದ ನಿನ್ನೆ 12 ಅಭ್ಯರ್ಥಿಗಳು ತಮ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದಾರೆ. ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಅತೀ ಹೆಚ್ಚು 19, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 15, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಒಬ್ಬ ಮಹಿಳೆ ಸೇರಿದಂತೆ 15 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 8, ನೈರುತ್ಯ ಪದವೀಧರ ಕ್ಷೇತ್ರದಲ್ಲಿ 10 ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಜೂ.3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಜೂ.6 ರಂದು ಈ ಆರು ಕ್ಷೇತ್ರಗಳಿಗೆ ಮತ ಎಣಿಕೆ ನಡೆಯಲಿದೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 99,121 ಪುರುಷ, 57,483 ಮಹಿಳೆ, ಇತರೆ 19 ಸೇರಿದಂತೆ 1,56,623 ಮತದಾರರು ಇದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ 43,720 ಪುರುಷ, 41,369 ಮಹಿಳೆ, ಇತರೆ ಒಬ್ಬರು ಸೇರಿದಂತೆ 85,090 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 58,791 ಪುರಷ, 63,055 ಮಹಿಳೆಯರು ಹಾಗೂ ಇತರೆ 14 ಸೇರಿದಂತೆ ಒಟ್ಟು 1,21,860 ಮತದಾರರು ಇದ್ದಾರೆ.ಈ ಮೂರು ಪದವೀಧರ ಕ್ಷೇತ್ರಗಳಲ್ಲಿ ಒಟ್ಟು 2,01,632 ಪುರುಷ, 1,61,907 ಮಹಿಳಾ, ಇತರೆ 34 ಸೇರಿದಂತೆ 3,63,573 ಮತದಾರರಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 15,820 ಪುರುಷ, 9,489 ಮಹಿಳೆ ಸೇರಿದಂತೆ 25,309 ಮತದಾರರಿದ್ದಾರೆ.ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 10,487 ಪುರುಷ, 12,915 ಮಹಿಳೆ ಸೇರಿದಂತೆ 23,402 ಮತದಾರರಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11,998 ಪುರುಷ, 9,550 ಮಹಿಳೆ, ಇತರೆ ಒಬ್ಬರು ಸೇರಿದಂತೆ 21,549 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
ಮೂರೂ ಶಿಕ್ಷಕರ ಕ್ಷೇತ್ರದಲ್ಲಿ 38,305 ಪುರುಷ, 31,954 ಮಹಿಳೆ ಹಾಗೂ ಇತರೆ ಒಬ್ಬರು ಸೇರಿದಂತೆ 70,260 ಮತದಾರರು ಮತ ಚಲಾಯಿಸುವ ಹಕ್ಕುಳ್ಳವರಾಗಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 47, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 79, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 44 ಸೇರಿದಂತೆ 170 ಮತಗಟ್ಟೆಗಳನ್ನು ತೆರೆಯಲಾಗುತ್ತದೆ.
ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 159, ನೈರುತ್ಯ ಪದವೀಧರ ಕ್ಷೇತ್ರದಲ್ಲಿ 108, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 194 ಸೇರಿದಂತೆ ಒಟ್ಟು 461 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.
ಮತದಾನಕ್ಕೆ ಒಂದು ದಿನ ಮುಂಚೆ ಕ್ಯೂ ಆರ್ ಕೋಡ್ ಇರುವ ಮತದಾರರ ಮಾಹಿತಿ ಸ್ಲಿಪ್ ಅನ್ನು ನೀಡಲಾಗುತ್ತದೆ. ಮತದಾನ ಮಾಡಲು ಮತದಾರರ ಗುರುತಿನ ಚೀಟಿ, ಆಧಾರ್‌ಕಾರ್ಡ್, ಡ್ರೈವಿಂಗ್ ಲೈಸೆನ್‌್ಸ, ಪಾನ್‌ಕಾರ್ಡ್, ಪಾಸ್‌ಪೋರ್ಟ್ ಸೇರಿದಂತೆ ಇತರೆ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.
ಜೂನ್ 13 ಕ್ಕೆ ಮತ್ತೊಂದು ಮೇಲನೆ ಚುನಾವಣೆ :
ವಿಧಾನಪರಿಷತ್ ಸದಸ್ಯರಾದ ಅರವಿಂದ ಕುಮಾರ್ ಅರಳಿ, ಎನ್.ಎಸ್.ಬೋಸರಾಜ್, ಕೆ.ಗೋವಿಂದರಾಜ್, ಮುನಿರಾಜುಗೌಡ, ಬಿ.ಎಂ. ಫಾರುಕ್, ರಘುನಾಥರಾವ್ ಮಲ್ಕಾಪುರ, ಎನ್.ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್‌ಕುಮಾರ್ ಅವರು ಜೂ.17 ರಂದು ನಿವೃತ್ತಿಯಾಗಲಿದ್ದಾರೆ.
ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಡಾ.ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.ನಿವೃತ್ತಿ ಹಾಗೂ ರಾಜೀನಾಮೆಯಿಂದ ತೆರವಾಗುವ ವಿಧಾನಪರಿಷತ್‌ನ 11 ಸದಸ್ಯ ಸ್ಥಾನಗಳಿಗೆ ಜೂ.13 ರಂದು ಚುನಾವಣೆ ನಡೆಯಲಿದೆ.
ವಿಧಾನಸಭಾ ಸದಸ್ಯರಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆ ಇದಾಗಿದ್ದು, ಮೇ 27 ರಂದು ಅಧಿಸೂಚನೆ ಹೊರಬೀಳಲಿದೆ.ನಾಮಪತ್ರ ಸಲ್ಲಿಸಲು ಜೂ.3 ಕಡೆಯ ದಿನವಾಗಿದ್ದು, ಜೂ. 3 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಜೂ.6 ರವರೆಗೆ ಕಾಲಾವಕಾಶವಿದ್ದು, ಅಗತ್ಯವಿದ್ದರೆ ಜೂ.13 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರಗೆ ಮತದಾನ ನಡೆದು, ಸಂಜೆ 5 ಗಂಟೆಯ ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.