ಬೆಂಗಳೂರು,ಡಿ.28- ಮುಂಬರುವ 2026 ಹೊಸ ವರ್ಷಾಚರಣೆಗೆ ಸಿದ್ದತೆಗಳು ಆರಂಭವಾಗಿರುವ ಬೆನ್ನಲ್ಲೇ ಮದ್ಯಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಬೆಂಗಳೂರು ಹಾಗೂ ಇತರೆ ಮಹಾನಗರ ಪಾಲಿಕೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಮದ್ಯ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಒಂದು ದಿನದ ಮಟ್ಟಿಗೆ ಮಾತ್ರ ಅನ್ವಯವಾಗಲಿದ್ದು, ಉಳಿದ ದಿನಗಳಲ್ಲಿ ಯಥಾಸ್ಥಿತಿ ಇರಲಿದೆ.
ಜನವರಿ 1ರಿಂದ ಮದ್ಯ ಮಾರಾಟಗಾರರು ಈ ಹಿಂದೆ ಇದ್ದ ಸಮಯದಲ್ಲೇ ಮದ್ಯ ಮಾರಾಟ ಮಾಡಬೇಕು. ಬುಧವಾರ ಮಾತ್ರ ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ಆದೇಶದಂತೆ ಡಿಸೆಂಬರ್ 31(ಬುಧವರಾ)ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆವರೆಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಾಮಾನ್ಯ ದಿನಗಳಲ್ಲಿ ಮದ್ಯ ಮಾರಾಟಕ್ಕೆ ಇರುವ ಸಮಯಕ್ಕಿಂತ ಹೆಚ್ಚು ಅವಧಿಗೆ ಅವಕಾಶ ನೀಡಲಾಗಿದೆ.
ಹೊಸ ವರ್ಷಾಚರಣೆಯ ಸಂಭ್ರಮವನ್ನು ನಿಯಂತ್ರಿತ ಹಾಗೂ ಸುರಕ್ಷಿತ ರೀತಿಯಲ್ಲಿ ಆಚರಿಸುವುದೇ ಈ ಕ್ರಮದ ಉದ್ದೇಶವಾಗಿದ್ದು, ಎಲ್ಲಾ ಬಾರ್‌ಗಳು, ಪಬ್‌ಗಳು, ವೈನ್‌ಶಾಪ್‌ಗಳು ಹಾಗೂ ಇತರೆ ಮದ್ಯ ಮಾರಾಟ ಕೇಂದ್ರಗಳಿಗೆ ಈ ನಿಯಮ ಅನ್ವಯವಾಗುತ್ತದೆ.
ಸಿಎಲ್-5 ಲೈಸೆನ್ಸ್ ಗೂ ಸಮಯ ಮಿತಿ:
ಖಾಸಗಿ ಪಾರ್ಟಿಗಳು, ವಿಶೇಷ ಕಾರ್ಯಕ್ರಮಗಳು ಮತ್ತು ತಾತ್ಕಾಲಿಕ ಮದ್ಯ ವಿತರಣೆಗೆ ಬಳಸುವ ಸಿಎಲ್-5 ಲೈಸೆನ್‌್ಸ ಹೊಂದಿರುವವರಿಗೂ ಇದೇ ನಿಯಮ ಅನ್ವಯವಾಗುತ್ತದೆ.
ಸಾಮಾನ್ಯವಾಗಿ ಸಿಎಲ್-5 ಲೈಸೆನ್‌್ಸ ಇದ್ದರೆ 24 ಗಂಟೆಗಳ ಕಾಲ ಮದ್ಯ ಪಾರ್ಟಿ ನಡೆಸಬಹುದು ಎಂಬ ಅಭಿಪ್ರಾಯವಿದೆ. ಆದರೆ, ಹೊಸ ವರ್ಷಾಚರಣೆಯ ದಿನಕ್ಕೆ ಸಂಬಂಧಿಸಿದಂತೆ ಇದಕ್ಕೂ ಕಟ್ಟುನಿಟ್ಟಿನ ಸಮಯ ಮಿತಿ ವಿಧಿಸಲಾಗಿದೆ.
ಆದೇಶದ ಪ್ರಕಾರ, ಸಿಎಲ್-5 ಲೈಸೆನ್ಸ್ ಹೊಂದಿರುವ ಖಾಸಗಿ ಪಾರ್ಟಿಗಳು ಕೂಡ ಮಧ್ಯರಾತ್ರಿ 1 ಗಂಟೆಯೊಳಗೆ ಮದ್ಯ ಮಾರಾಟ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. 1 ಗಂಟೆ ನಂತರ ಯಾವುದೇ ಕಾರಣಕ್ಕೂ ಮದ್ಯ ವಿತರಣೆ ನಡೆಸುವಂತಿಲ.ಹೊಸ ವರ್ಷದ ಸಂಭ್ರಮದ ವೇಳೆ ಅಹಿತಕರ ಘಟನೆಗಳು, ಅಪಘಾತಗಳು, ಗಲಾಟೆಗಳು ನಡೆಯದಂತೆ ತಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಮದ್ಯ ಅತಿಯಾದ ಸೇವನೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸಮಯದ ಮಿತಿಯನ್ನು ನಿಗದಿಪಡಿಸಲಾಗಿದೆ.
ನಿಗದಿತ ಸಮಯದ ನಂತರ ಮದ್ಯ ಮಾರಾಟ ಅಥವಾ ವಿತರಣೆ ನಡೆಸಿದರೆ, ಸಂಬಂಧಿಸಿದ ಲೈಸೆನ್‌್ಸ ರದ್ದತಿ ಸೇರಿದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ವರ್ಷದ ಸಂಭ್ರಮವನ್ನು ಎಲ್ಲರೂ ಸುರಕ್ಷಿತವಾಗಿ, ಶಾಂತಿಯುತವಾಗಿ ಆಚರಿಸುವಂತೆ ನಾಗರಿಕರಲ್ಲಿ ಮನವಿ ಮಾಡಲಾಗಿದೆ.
