ನವದೆಹಲಿ,ಮೇ22- ಮುಖ್ಯಮಂತ್ರಿ ಮತ್ತು ಆಮ್ ಆದಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಕೊಲೆ ಬೆದರಿಕೆ ಸಂದೇಶ ಬರೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಆರೋಪಿ ಅಂಕಿತ್ ಗೋಯಲ್(33) ಎಂದು ಗುರುತಿಸಲಾಗಿದೆ.
ಈತ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಬೆದರಿಕೆ ಸಂದೇಶ ಬರೆದಿದ್ದನು. ಅಂಕಿತ್ ಕೃತ್ಯ ಮೆಟ್ರೋ ನಿಲ್ದಾಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಾಕ್ಷಿ ಆಧರಿಸಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮೆಟ್ರೋ ಘಟಕವು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಈ ಹಿಂದೆ ಬೆದರಿಕೆ ಸಂದೇಶ ಕುರಿತು ಎಕ್‌್ಸ ಖಾತೆಯಲ್ಲಿ ಬರೆದುಕೊಂಡಿದ್ದ ಎಎಪಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಾರ್ವಜನಿಕವಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಪಿಎಂಒ, ಬಿಜೆಪಿ ಮತ್ತು ನರೇಂದ್ರ ಮೋದಿಯವರ ಆದೇಶದ ಮೇರೆಗೆ ರಾಜೀವ್ ಚೌಕ್, ಪಟೇಲ್ ನಗರ ಮೆಟ್ರೋ ನಿಲ್ದಾಣದಲ್ಲಿ ಬೆದರಿಕೆ ಸಂದೇಶ ಬರೆಯಲಾಗಿದೆ.
ಹೀಗಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿ ಮತ್ತು ನರೇಂದ್ರಮೋದಿ ನೇರ ಹೊಣೆಯಾಗುತ್ತಾರೆ ಎಂದು ಗಂಭೀರ ಆರೋಪ ಮಾಡಿತ್ತು.