ಮೈಸೂರು,ಮೇ22- ಅಶ್ಲೀಲ ವಿಡಿಯೋವನ್ನು ಚುನಾವಣೆ ಲಾಭಕ್ಕಾಗಿ ವಿತರಣೆ ಮಾಡಿದ್ದು ಅಪರಾಧವಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ಮಾಡಿರುವುದು ಒಂದು ಭಾಗವಾದರೆ ಅಂಥ ವಿಡಿಯೋವನ್ನು ಹಂಚಿರುವುದು ಅಪರಾಧವಲ್ಲವೇ? ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಂಡರೆ ನನಗೆ ಅಸೂಯೆ ಎಂದು ಹೇಳಿದ್ದಾರೆ. ಏಕೆ ಅಸೂಯೆ ಪಡೆಯಲಿ, ಅಧಿಕಾರ ಯಾರಪ್ಪನ ಆಸ್ತಿಯೂ ಅಲ್ಲ. ರಾಜಕಾರಣದಲ್ಲಿ ಏಳುಬೀಳು ಸಹಜ. ಭಗವಂತನ ಇಚ್ಛೆಯಂತೆ ಆಗುತ್ತದೆ. ಅದರಲ್ಲಿ ಏಕೆ ಅಸೂಯೆ ಪಡೆಯಲಿ ಎಂದು ಪ್ರಶ್ನಿಸಿದರು.
ಪ್ರಧಾನಿ ಸ್ಥಾನವನ್ನು ಅತ್ಯಂತ ಸುಲಭವಾಗಿ ತೆರವು ಮಾಡಿದ ವಂಶ ನಮದು. ಈಗಾಗಲೇ ಎಲ್ಲಾ ಅಧಿಕಾರವನ್ನು ನಾವು ನೋಡಿಯಾಗಿದೆ. ಅಧಿಕಾರ ಬೇಡವೆಂದರೂ ಬಂದಿದೆ. ನಾವೆಂದೂ ಅಧಿಕಾರವನ್ನು ಹುಡುಕಿಕೊಂಡು ಹೋಗಿರಲಿಲ್ಲ ಎಂದು ತಿರುಗೇಟು ನೀಡಿದರು.
ಮಹಾನುಭಾವರು 1980ರಲ್ಲೇ ಸಿಡಿ ಫ್ಯಾಕ್ಟ್ರಿ ಓಪನ್ ಮಾಡಿದ್ದರು. ಈಗಾಗಲೇ ಸಂಚಲನ ಮೂಡಿಸಿರುವ ಪೆನ್‌ಡ್ರೈವ್ ಮೂಲವೇ ಕಾರ್ತಿಕ್. ಆತ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಮೂಲಕ ಸಂಸದ ಡಿ.ಕೆ.ಸುರೇಶ್ ಅವರ ಬಳಿಗೆ ಮೊದಲು ಹೋಗಿದ್ದರು. ನಂತರ ಅದನ್ನು ಸಿ.ಡಿ ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಆರೋಪ ಕೇಳಿಬಂದಿರುವ ಸಂಸದ ಪ್ರಜ್ವಲ್ ಪರವಾಗಿ ಇಲ್ಲ. ಒಂದು ವೇಳೆ ಆರೋಪ ಸಾಬೀತಾಗಿ ಅಪರಾಧ ಮಾಡಿರುವುದು ದೃಢಪಟ್ಟರೆ ಕಾನೂನು ರೀತಿ ಶಿಕ್ಷೆ ಕೊಡಲಿ ಎಂದರು.
ವಕೀಲ ದೇವರಾಜೇಗೌಡ, ಮಾಜಿ ಸಂಸದ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ಅವರು ಪೆನ್‌ಡ್ರೈವ್ ವಿತರಣೆಯ ಹಿಂದಿದ್ದಾರೆ. ಅರ್ಧ ನಿಮಿಷದಲ್ಲೇ ಎಲ್ಲವೂ ತೀರ್ಮಾನವಾಗಿದೆ ಎಂದು ಆರೋಪಿಸಿದರು.
ನನ್ನ ಬಳಿ ಇರುವ ಪೆನ್‌ಡ್ರೈವ್ ರಾಜ್ಯ ಸರ್ಕಾರದ ವರ್ಗಾವಣೆಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು, ಅದನ್ನು ಬಹಿರಂಗಪಡಿಸಿದರೆ ನನ್ನದೇ ಸೃಷ್ಟಿ ಎಂದು ಹೇಳುತ್ತೀರ. ಇದುವರೆಗೂ ಎಸ್‌ಐಟಿಗೆ ನೀಡಿರುವ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳೀ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವ ಪ್ರಕರಣವನ್ನು ಎಸ್‌ಐಟಿಗೆ ಕೊಟ್ಟಿರಲಿಲ್ಲ ಎಂದ ಅವರು, ಫೋನ್ ಟ್ಯಾಪ್ ಮಾಡಲು ಅವರೇನು ಟೆರರಿಸ್ಟಾ ಎಂದು ಕೆಲವರು ಕೇಳಿದ್ದಾರೆ. ಅವರ ಸುತ್ತಮುತ್ತ ಟೆರರಿಸ್ಟ್‌ಗಳೇ ಇದ್ದಾರೆ ಎಂದು ಆಪಾದಿಸಿದರು.
ಪೆನ್‌ಡ್ರೈವ್ ಅವರ ಬುಡಕ್ಕೆ ಬರುತ್ತಿರುವುದನ್ನು ಗಮನಿಸಿ ಮುಖ್ಯಮಂತ್ರಿ ಯಾರೂ ಆ ಬಗ್ಗೆ ಮಾತನಾಡಬೇಡಿ ಎಂದು ಸೂಚಿಸಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೂ ಹಾಗೂ ಪೆನ್‌ಡ್ರೈವ್ ಪ್ರಕರಣಕ್ಕೂ ಸಂಬಂಧವಿಲ್ಲ. ಈ ಪ್ರಕರಣದಿಂದ ನಮ ಕುಟುಂಬಕ್ಕೆ ಸ್ವಲ್ಪ ಡ್ಯಾಮೇಜ್ ಆಗಿರುವುದು ಸತ್ಯ. ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಸಂಪರ್ಕದಲ್ಲೂ ಇಲ್ಲ. ಈ ಸಂದರ್ಭದಲ್ಲಿ ನಾನು ವಿದೇಶಕ್ಕೆ ಹೋದರೆ ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಎಂದು ಸುದ್ದಿ ಹಬ್ಬಿಸಿಬಿಡುತ್ತಾರೆ. ಭಯದಿಂದ ಹೋಗಿರಬಹುದು. ವಕೀಲರ ಸಲಹೆ ಪಡೆಯುವುದು ಬೇಡ, ನೈತಿಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಸ್ ಬಾ ಎಂದು ಮತ್ತೊಮೆ ಬಹಿರಂಗ ಕರೆಯನ್ನು ಕುಮಾರಸ್ವಾಮಿ ನೀಡಿದರು.