ಬೆಂಗಳೂರು, ಮೇ 22- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳು ಇಂದು ನಗರ ಸಂಚಾರ ನಡೆಸಿ ಮಳೆಯಿಂದಾಗಿ ಬಾಧಿತವಾದ ಪ್ರದೇಶಗಳ ಪರಿವೀಕ್ಷಣೆ ನಡೆಸಿದರು.
ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಮಂಕಾಳ ಸುಬ್ಬವೈದ್ಯ, ವಿಧಾನಪರಿಷತ್ ಸದಸ್ಯರಾದ ಗೋವಿಂದ ರಾಜು, ನಾಗರಾಜ್ ಯಾದವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಘೋಯಲ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಲವರು ಜೊತೆಯಲ್ಲಿದ್ದರು.
ಆರಂಭದಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಗಾಳಿ ಆಂಜನೇಯ ದೇವಸ್ಥಾನ ಸಮೀಪದ ರಾಜಕಾಲುವೆಯನ್ನು ಮುಖ್ಯಮಂತ್ರಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಜೊತೆ ಚರ್ಚೆ ನಡೆಸಿದರು.ವಾಡಿಕೆಗಿಂತ ಹೆಚ್ಚು ಮಳೆಯಾದ ಸಂದರ್ಭದಲ್ಲಿ ರಾಜಕಾಲುವೆಯಿಂದ ಪ್ರವಾಹ ತೀವ್ರವಾಗಲಿದೆ. ದೇವಸ್ಥಾನ ಸೇರಿದಂತೆ ಅಕ್ಕಪಕ್ಕದ ಜನವಸತಿ ಪ್ರದೇಶಗಳಿಗೂ ನೀರು ನುಗ್ಗಲಿದೆ ಎಂದು ಸ್ಥಳೀಯರು ವಿವರಿಸಿದರು.
ಪ್ರಸ್ತುತ ಚಾಲ್ತಿಯಲ್ಲಿರುವ ರಾಜಕಾಲುವೆಗೆ ಸಮಾನಾಂತರವಾಗಿ ಮತ್ತೊಂದು ಕಾಲುವೆ ನಿರ್ಮಿಸುವುದರಿಂದ ಪ್ರವಾಹವನ್ನು ತಗ್ಗಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮುಖ್ಯಮಂತ್ರಿಯವರಿಗೆ ವಿವರಿಸಿದರು. ಇದಕ್ಕೆ ಅಂದಾಜು 11.5 ಕೋಟಿ ರೂ. ಗಳ ವೆಚ್ಚವಾಗಲಿದೆ ಎಂದು ಯೋಜನಾ ನಕ್ಷೆ ಸಹಿತ ಮಾಹಿತಿ ನೀಡಿದರು. ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಸೂಚಿಸಿದ ಮುಖ್ಯಮಂತ್ರಿಯವರು, ರಾಜಕಾಲುವೆಗೆ ಕಸ ಎಸೆಯುವುದನ್ನು ತಡೆಗಟ್ಟಲು ಆದೇಶಿಸಿದರು.
ನಗರ ವೀಕ್ಷಣೆಯಲ್ಲಿ ಬೇರೆ ಬೇರೆಯಾದ ಸಿಎಂ, ಡಿಸಿಎಂ :
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರು ಜಂಟಿಯಾಗಿ ನಗರ ವೀಕ್ಷಣೆಗೆ ತೆರಳಿದರು. ಪೊಲೀಸರು ಭದ್ರತೆಗಾಗಿ ಹಗ್ಗದ ಬ್ಯಾರಿಕೇಡ್ ಸಹಿತವಾಗಿ ಮಾನವ ಸರಪಳಿ ನಿರ್ಮಿಸಿದರು. ಅದರ ನಡುವೆಯೂ ಸಾರ್ವಜನಿಕರು ಮುಖ್ಯಮಂತ್ರಿಗಳ ಬಳಿ ತಮ್ಮ ಅಹವಾಲು ಹೇಳಲು ಅರ್ಜಿ ಹಿಡಿದು ನಿಂತಿದ್ದು ಕಂಡುಬಂದಿತು.
ಗಾಳಿ ಆಂಜನೇಯ ದೇವಸ್ಥಾನದ ಬಳಿ ಪರಿಶೀಲನೆಗಾಗಿ ಕೆಳಗಿಳಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪೈಕಿ ಡಿ.ಕೆ.ಶಿವಕುಮಾರ್‌ರವರು ಸ್ಕೈವಾಕ್ ಹತ್ತಿ ಮೇಲೆ ಹೋಗಿ ರಾಜಕಾಲುವೆಯ ನೀರು ಹರಿಯವುದನ್ನು ವೀಕ್ಷಿಸಿದರು. ಅದನ್ನು ಮುಖ್ಯಮಂತ್ರಿಯವರಿಗೂ ತೋರಿಸಲು ಮೇಲೆ ಬರುವಂತೆ ಪದೇಪದೇ ಮನವಿ ಮಾಡಿದರು. ಆದರೆ ಮುಖ್ಯಮಂತ್ರಿಯವರು ರಾಜಕಾಲುವೆಯ ಪಕ್ಕ ಕೆಳಗಡೆ ನಿಂತು ಅಧಿಕಾರಿಗಳಿಂದ ಕಾಮಗಾರಿಗಳ ವಿವರಣೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯವರನ್ನೇ ಕೆಳಗೆ ಬರುವಂತೆ ಮುಖ್ಯಮಂತ್ರಿಗಳ ಸಿಬ್ಬಂದಿಗಳು ಮನವಿ ಮಾಡಿದರು. ಆದರೆ ಜನಜಂಗುಳಿ ಜಾಸ್ತಿ ಇದ್ದುದರಿಂದಾಗಿ ಡಿ.ಕೆ.ಶಿವಕುಮಾರ್ ಸ್ಕೈವಾಕ್ ಮೇಲೆಯೇ ಉಳಿದರು. ಅಧಿಕಾರಿಗಳ ಜೊತೆ ಚರ್ಚೆಯ ಬಳಿಕ ಮುಖ್ಯಮಂತ್ರಿಯವರು ಡಿ.ಕೆ.ಶಿವಕುಮಾರ್ ಅವರ ಬಳಿ ತೆರಳಿ ವೀಕ್ಷಣೆ ನಡೆಸಿದರು.
ಗುಡಿಸಲು ತೆರವಿಗೆ ಆದೇಶ :
ನಾಯಂಡಹಳ್ಳಿ ಬಳಿ ಸ್ಥಳ ವೀಕ್ಷಣೆ ನಡೆಸಿದ ಸಿಎಂ, ಡಿಸಿಎಂ ಅವರು ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿರುವ ಗುಡಿಸಲುಗಳನ್ನು ತೆರವುಗೊಳಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಸೂಚಿಸಿದರು. ನಾಯಂಡಹಳ್ಳಿಯಲ್ಲಿ ಮೇಲುಸೇತುವೆ ನಿರ್ಮಿಸುವುದರಿಂದ ರಾಜಕಾಲುವೆ ವಿಸ್ತಾರ ಕಡಿಮೆಯಾಗಿದೆ. ಹೆಚ್ಚುವರಿ ಕಾಲುವೆ ನಿರ್ಮಾಣ 7 ಕೋಟಿ ರೂ. ವೆಚ್ಚದ ಕಾಮಗಾರಿಗೆ ತಾತ್ವಿಕ ಅನುಮೋದನೆ ಸಿಕ್ಕಿದೆ. ಆದರೆ ಅದಕ್ಕೆ ಆರ್ಥಿಕ ಇಲಾಖೆ ಹಾಗೂ ಕಂದಾಯ ಇಲಾಖೆ ಅನುಮೋದನೆ ಅಗತ್ಯವಿದೆ ಎಂದು ತುಷಾರ್ ಗಿರಿನಾಥ್‌ರವರು ವಿವರಿಸಿದರು.
ಎರಡು ಇಲಾಖೆಗಳು ಶೀಘ್ರವೇ ಅನುಮೋದನೆ ನೀಡಬೇಕು. ಕಾಮಗಾರಿ ತುರ್ತಾಗಿ ಆರಂಭಗೊಳ್ಳಬೇಕೆಂದು ಮುಖ್ಯಮಂತ್ರಿಯವರು ಇದೇ ವೇಳೆ ಸೂಚನೆ ನೀಡಿದರು.ರಾಜಕಾಲುವೆಯ ಮಾರ್ಗದ ಸರ್ಕಾರಿ ಜಾಗದಲ್ಲಿ ಸುಮಾರು 20 ರಿಂದ 30 ಗುಡಿಸಲುಗಳು ತಲೆ ಎತ್ತಿದ್ದು, ಅವುಗಳನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳು ವಿವರಿಸಿದಾಗ ಈ ನಿಟ್ಟಿನಲಿ ಕ್ರಮ ಕೈಗೊಳ್ಳುವಂತೆ ಕೊಳಚೆ ನಿರ್ಮೂಲನ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ರಸ್ತೆಗಾಗಿ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಗೆ ಪರ್ಯಾಯವಾಗಿ ಕೆಐಎಡಿಬಿ ಜಾಗ ನೀಡಬೇಕೆಂದು ಅಧಿಕಾರಿಗಳು ವಿವರಿಸಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚನೆ ನೀಡಿದರು. ಉದ್ದೇಶಿತ ಕಾಮಗಾರಿ ಪೂರ್ಣಗೊಂಡರೆ ನೀರು ಹರಿಯುವಿಕೆ ಸರಾಗವಾಗಲಿದೆ ಎಂದು ವಿವರಿಸಲಾಯಿತು.
ನಗರದ ಇತರ ಭಾಗಗಳಲ್ಲೂ ಡಬಲ್ ಡೆಕ್ಕರ್ :
ಬಿಟಿಎಂ ಲೇ ಔಟ್‌ನ ಮೆಟ್ರೋ ಸ್ಟೇಷನ್‌ಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯಮಂತ್ರಿಯವರು, ಮೇಲುಸೇತುವೆ ರಸ್ತೆ ಹಾಗೂ ಮೆಟೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್ ಡೆಕ್ಕರ್ – 2 ಟಯರ್ ವ್ಯವಸ್ಥೆಯನ್ನು ನಗರದ ಇತರ ಭಾಗಗಳಿಗೂ ಅಳವಡಿಸುವಂತೆ ಸೂಚನೆ ನೀಡಿದರು.ಮೂರು ಕಿ.ಮೀ. ಉದ್ದದ ಈ ವ್ಯವಸ್ಥೆ ಸಂಚಾರ ದಟ್ಟಣೆ ನಿವಾರಣೆಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.
ಸಿಲ್ಕ್ ಬೋರ್ಡ್ ಜಂಕ್ಷನ್ ಸಂಚಾರ ದಟ್ಟಣೆಗೆ ಪರಿಹಾರ ರೂಪವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದಲ್ಲದೆ, ಸುಗಮ ಸಂಚಾರಕ್ಕಾಗಿ, ಬಿಟಿಎಂ ನಿಂದ ಬನಶಂಕರಿ ಕಡೆಗೆ ಹೋಗುವಾಗ, ರಾಘವೇಂದ್ರಸ್ವಾಮಿ ಟೆಂಪಲ್ ಸರ್ಕಲ್, ಜಯನಗರ 5ನೇ ಬ್ಲಾಕ್‌ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿ ಅಂಡರ್ ಪಾಸ್ ನಿರ್ಮಿಸಲು ಸೂಚಿಸಿದರು.
ಒಣಮರ ತೆರವಿಗೆ ಆದೇಶ :
ಬನಶಂಕರಿ ಎರಡನೇ ಹಂತದ 100 ಅಡಿ ರಸ್ತೆಯಲ್ಲಿ ಸಂಚರಿಸುವಾಗ ಒಣಮರಗಳನ್ನು ತೆರವುಗೊಳಿಸದೇ ಇರುವುದನ್ನು ಗಮನಿಸಿದ ಮುಖ್ಯಮತ್ರಿಯವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಳೆ ಗಾಳಿಯಿಂದ ಅನಾಹುತವಾಗಲಿ ಎಂದು ಕಾಯುತ್ತಿದ್ದೀರಾ? ಯಾವ ಕಾರಣಕ್ಕಾಗಿ ಒಣಮರಗಳನ್ನು ತೆರವುಗೊಳಿಸಿಲ್ಲ ಎಂದು ಮುಖ್ಯಮಂತ್ರಿ ಕಿಡಿಕಾರಿದರು.
ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು. ಪದನಾಭನಗರ ಮೇಲ್ಸೇತುವೆ ಬಳಿ ಹಾನಿಯಾಗಿರುವ ಫುಟ್‌ಪಾತ್ ಅನ್ನು ಶೀಘ್ರವಾಗಿ ದುರಸ್ತಿಗೊಳಿಸಬೇಕು. ಮೆಟ್ರೋ, ಮೇಲ್ಸೇತುವೆ ಕಾಮಗಾರಿಗಳಿಂದಾಗಿ ಅಲ್ಲಲ್ಲಿ ಹಾಕಿರುವ ಡೆಬ್ರಿಸ್‌ಗಳನ್ನು ತೆರವುಗೊಳಿಸಬೇಕೆಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ.