ಬೆಂಗಳೂರು ಡಿ.28– ಮುಂದಿನ ಎರಡು ಮೂರು ತಿಂಗಳ ಒಳಗಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತ್ ಗಳಿಗೆ ಚುನಾವಣೆ ನಡೆಸಲು ತಯಾರಿ ಮಾಡಿಕೊಳ್ಳುವುದಾಗಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಕಾಂಗ್ರೆಸ್ ಮತ್ತು ಸೇವಾದಳದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹೆಚ್ಚು ದಿನ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಮೀಸಲಾತಿ ಹಾಗೂ ನ್ಯಾಯಾಲಯದಲ್ಲಿರುವ ತಗಾದೆಗಳನ್ನು ಎರಡು ಮೂರು ತಿಂಗಳ ಒಳಗಾಗಿ ಇತ್ಯರ್ಥಪಡಿಸಿ ಚುನಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚನೆ ನೀಡಿದ್ದಾರೆ ಎಂದರು. ಅದೇ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿನ 5 ಪಾಲಿಕೆಗಳ 369 ವಾರ್ಡ್‌ಗಳ ಸದಸ್ಯರ ಆಯ್ಕೆಗೂ ಚುನಾವಣೆ ನಡೆಯಲಿದೆ ಎಂದು ಹೇಳಿದರು.
ಮೀಸಲಾತಿ ನಿಗದಿಯಾದ ಬಳಿಕ ಚುನಾವಣೆಯ ಬಿ-ಫಾರಂಗಾಗಿ ಪಕ್ಷಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಯಾರು ಕಾಯುತ್ತಾ ಕುಳಿತು ಕೊಳ್ಳುವಂತಿಲ್ಲ. ಇಂದಿನಿಂದಲೇ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಜನವರಿ 15ಕ್ಕೆ ಮುಕ್ತಾಯಗೊಳ್ಳಲಿದೆ. ಸಾಮಾನ್ಯ ವರ್ಗದವರು 50 ಸಾವಿರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 25 ಸಾವಿರ ಪಾವತಿಸಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.
ಅರ್ಜಿಯೊಂದಿಗೆ ಸ್ವೀಕರಿಸಲಾಗುತ್ತಿರುವ ಹಣವನ್ನು ಪಕ್ಷದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಚೇರಿಗೆ 70 ಕೋಟಿ, ಜಿಲ್ಲಾ ಮಟ್ಟದ ಕಚೇರಿಗೆ 20 ಕೋಟಿ ವೆಚ್ಚ ಮಾಡಬೇಕಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ತಲಾ ಎರಡು ಲಕ್ಷದಂತೆ ಒಟ್ಟು 20 ಕೋಟಿ ಸಂಗ್ರಹಿಸಿ ಅದರಲ್ಲಿ ಈಗಿರುವ ಭವನವನ್ನು ಪೂರ್ಣಗೊಳಿಸಲಾಯಿತು. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ನನಗೆ ಹಣ ನೀಡಬೇಡಿ. ಕಟ್ಟಡ ನಿರ್ಮಾಣಕ್ಕೆ ಕೊಡಿ ಎಂದು ಕೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರಿಂದ ತಮಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಬೇಕು ಎಂಬ ಬೇಡಿಕೆ ಬಂದಾಗ, ಅದೆಲ್ಲ ಸಾಧ್ಯವಿಲ್ಲ. ಚುನಾವಣೆಗೆ ಎಷ್ಟು ಖರ್ಚಾಗುತ್ತದೆ ಎಂದು ನನಗೆ ಗೊತ್ತಿದೆ. ಇಷ್ಟ ಇದ್ದವರು ಅರ್ಜಿ ಹಾಕಿ, ಇಲ್ಲದಿದ್ದರೆ ಬೇಡ ಎಂದು ನಿಷ್ಠೂರವಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಒಬಿಸಿ ವರ್ಗಕ್ಕೂ ಶುಲ್ಕ ವಿನಾಯಿತಿ ನೀಡಬೇಕು ಎಂದು ಕೆಲವರು ಮನವಿ ಮಾಡಿದಾಗ, ಹೇ.. ಸುಮನಿರಪ್ಪ. ಯಾವ ಒಬಿಸಿಯೂ ಇಲ್ಲ. ನಾನು ಒಬಿಸಿನೇ. ಒಕ್ಕಲಿಗರು, ಲಿಂಗಾಯಿತರು, ಆದಾಯ ಇಲ್ಲದ ಬ್ರಾಹಣರು ಕೂಡ ಒಬಿಸಿಗಳೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಜೆ.ಜಾರ್ಜ್ ಮಧ್ಯ ಪ್ರವೇಶಿಸಿದ್ದರಿಂದಾಗಿ ಮಹಿಳೆಯರ ಅರ್ಜಿ ಶುಲ್ಕವನ್ನು 25 ಸಾವಿರ ರೂಪಾಯಿಗಳಿಗೆ ಕಡಿತ ಮಾಡುವುದಾಗಿ ಘೋಷಿಸಿದರು.
ಈ ಹಿಂದೆ ಶಾಲಾ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆದು ನಾಯಕತ್ವ ಸೃಷ್ಟಿಯಾಗುತ್ತಿತ್ತು. ಕೆ.ಎಚ್.ರಂಗನಾಥ್ ಅವರು ಸಚಿವರಾಗಿದ್ದಾಗ, ಶಿಕ್ಷಣ ಸಂಸ್ಥೆಗಳಲ್ಲಿ ಗಲಾಟೆಗಳಾಗುತ್ತವೆ ಎಂದಬ ಕಾರಣಕ್ಕೆ ಕಾಲೇಜು ಚುನಾವಣೆಗಳನ್ನು ರದ್ದು ಮಾಡಿದ್ದರು. ಈಗ ರಾಹುಲ್ ಗಾಂಧಿಯವರು ನನಗೆ ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಯುವ ನಾಯಕತ್ವ ಬೆಳೆಸಲು ಕಾಲೇಜುಗಳಲ್ಲಿ ಚುನಾವಣೆ ನಡೆಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಚಿವ ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಇದನ್ನು ರಾಜ್ಯಾದ್ಯಂತ ಸಂಭ್ರಮಿಸಬೇಕಿದೆ. ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಆಯೋಜಿಸಬೇಕು ಎಂದು ಹೇಳಿದರು.ಮತಗಳ್ಳತನದ ವಿರುದ್ಧ ಪಂಚಾಯಿತಿ ಮಟ್ಟದಲ್ಲಿ ಜನವರಿ 5ರಿಂದ ಪ್ರತಿಭಟನೆಗಳಾಗಬೇಕಿದೆ. ಸರ್ಕಾರ ವಿವಿಧ ಸಮಿತಿಗಳಿಗೆ ತಾಲೂಕುವಾರು ಇನ್ನೂರಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಮಾಡಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರಾಗಿದ್ದವರು ಕೈ ಜೋಡಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು. ಹಾಗೆಯೇ ಗ್ಯಾರಂಟಿ ಸಂಭ್ರಮದಲ್ಲೂ ಭಾಗವಹಿಸಿ ಆಚರಿಸಿ ಜನ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಉದ್ಯೋಗ ಖಾತ್ರಿ ಯೋಜನೆಗೆ ರಾಜ್ಯ ಸರ್ಕಾರಗಳು ಶೇ.40ರಷ್ಟು ವೆಚ್ಚ ಭರಿಸಬೇಕು ಎಂದು ಕೇಂದ್ರ ಸರ್ಕಾರ ರೂಪಿಸಿರುವ ತಿದ್ದುಪಡಿ ಅವೈಜ್ಞಾನಿಕವಾಗಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಇದನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.
ಪಕ್ಷಕ್ಕೆ ನೂರು ಕಚೇರಿಗಳನ್ನು ನಿರ್ಮಿಸುವ ಗುರಿಗೆ ಈಗಾಗಲೇ 70 ಕಚೇರಿಗಳಿಗಾಗಿ ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ವೇದಿಕೆಯ ಮೇಲೆ ಕುಳಿತವರಷ್ಟೇ ನಾಯಕರಲ್ಲ ಬೂತ್ ಮಟ್ಟದಲ್ಲಿ ಬಡಿದಾಡುವ ಕಾರ್ಯಕರ್ತರು ಕೂಡ ಪ್ರಮುಖರು. ವೇದಿಕೆ ಮೇಲೆ ಕೂರಲು ಜನ ಇಲ್ಲದೆ ಇದ್ದರೂ ನಡೆಯುತ್ತದೆ. ಆದರೆ ವೇದಿಕೆ ಮುಂದೆ ಕಾರ್ಯಕ್ರಮ ನೋಡಲು ಜನ ಇಲ್ಲದಿದ್ದರೆ. ಅದು ಕೊರತೆಯಾಗಲಿದೆ ಎಂದು ಎಂದು ಹೇಳಿದರು.
ಇಂದು ಕಾಂಗ್ರೆಸ್ ಸಂಸ್ಥಾಪನೆ ದಿನಾಚರಣೆ ಜೊತೆ ಸೇವಾ ದಳದ ಸಂಸ್ಥಾಪನೆ ಕೂಡ ಆಗಿದೆ. ಕಾಂಗ್ರೆಸ್‌ಗೆ ತನ್ನದೇ ಆದ ಭವ್ಯ ಪರಂಪರೆ ಮತ್ತು ಇತಿಹಾಸ ಇದೆ. ಬಿಜೆಪಿಯವರಿಗೆ ಯಾವ ಇತಿಹಾಸ ಇದೆ ಎಂದು ಪ್ರಶ್ನಿಸಿದರು.
ಇಂಧನ ಸಚಿವ ಕೆ.ಜೆ.ಚಾರ್ಜ್ ಮಾತನಾಡಿ, ಕಾಂಗ್ರೆಸ್ ತುಂಬಾ ಕಷ್ಟದ ದಾರಿಯಲ್ಲಿ ಸಾಗಿ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರ ಇದ್ದರೆ ಮಾತ್ರ ಕಾಂಗ್ರೆಸ್ ಎಂಬಂತಹ ವಾತಾವರಣ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಗುಂಡಿಗೆ ಎದೆ ಕೊಟ್ಟಾಗ ನಮ ಹಿರಿಯರಿಗೆ ಅಧಿಕಾರದ ಯಾವುದೇ ಆಸೆಯೂ ಇರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಯಾವುದೇ ಕೊಡುಗೆ ನೀಡದ ಬಿಜೆಪಿಯವರು, ಇಂದು ಕಾಂಗ್ರೆಸ್ ಪಕ್ಷವನ್ನು ಭಾರತದಲ್ಲಿ ನಿರ್ಮೂಲನೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
