ಲಖ್ನೋ,ಮೇ24- ಮದುವೆಯೊಂದರಲ್ಲಿ ತಾಳಿ ಕಟ್ಟಿದ ಬಳಿಕ ವರ, ವಧುವಿಗೆ ಮುತ್ತಿಟ್ಟಿದ್ದಕ್ಕೆ ದೊಡ್ಡ ರಾಧಾಂತ ನಡೆದು ಮದುವೆ ಮಂಟಪವು ರಣರಂಗವಾದ ಘಟನೆ ಉತ್ತರಪ್ರದೇಶದ ಅಶೋಕನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹಾರ ಹಾಕಿದ ಬಳಿಕ ವರ ವಧುವಿಗೆ ಮುತ್ತು ಕೊಟ್ಟಿದ್ದಕ್ಕೆ ಎರಡೂ ಕಡೆಯ ಕುಟುಂಬಸ್ಥರು ಹೊಡೆದಾಡಿಕೊಂಡಿದ್ದಾರೆ. ವರನ ಮುತ್ತಿನಾಟಕ್ಕೆ ಸಿಟ್ಟಿಗೆದ್ದ ವಧುವಿನ ಕಡೆಯವರು ಜಗಳ ತೆಗೆದಿದ್ದಾರೆ.
ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದ್ದಾರೆ. ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಕಾರ, ರಾತ್ರಿ ವಧುವಿನ ತಂದೆ ತನ್ನ ಇಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಏರ್ಪಡಿಸಿದ್ದರು. ಮೊದಲ ಮದುವೆ ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಂಡರೆ, ಎರಡನೇ ಮದುವೆಯಿಂದ ದೊಡ್ಡ ರಾದ್ಧಾಂತವೇ ಸೃಷ್ಟಿಯಾಗಿತ್ತು.
ವಧುವಿನ ಕುಟುಂಬವು ವರನು ವೇದಿಕೆಯ ಮೇಲೆ ಬಲವಂತವಾಗಿ ಚುಂಬಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಹಾರ ಬದಲಾಯಿಸುವ ಸಮಾರಂಭದ ನಂತರ ವಧು ಚುಂಬಿಸುವಂತೆ ಒತ್ತಾಯಿಸಿದಳು ಎಂದು ವರ ಹೇಳಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಲಿಖಿತ ದೂರು ಬಂದಿಲ್ಲ ಮತ್ತು ದೂರು ಸ್ವೀಕರಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಹಾಪುರ ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151ರಡಿ ಸಾರ್ವಜನಿಕ ಶಾಂತಿ ಕದಡುವ ಆರೋಪದಡಿ ಆರು ಜನರ ಮೇಲೆ ಆರೋಪ ಹೊರಿಸಲಾಗಿದೆ. ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.