ತಿ.ನರಸೀಪುರ,ಡಿ.29-ಯುವತಿಯೊಬ್ಬಳು ಕಾಣೆಯಾದ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖಂಡರು ಯುವಕನೊಬ್ಬನಿಗೆ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಭಯಭೀತನಾದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬನ್ನೂರು ಪೋಲೀಸ್ ಠಾಣಾ ವ್ಯಾಪ್ತಿಯ ಬಿ.ಸೀಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಲೇಟ್ ಜಯರಾಮು ಎಂಬುವರ ಪುತ್ರ ನಾಗೇಂದ್ರ(23) ಆತಹತ್ಯೆಗೆ ಶರಣಾದ ಯುವಕ. ಗ್ರಾಮದ ಅಂಕಿತಾ ಎಂಬ ಯುವತಿ ಕಾಣೆಯಾದ ವಿಷಯಕ್ಕೆ ಸಂಬಂಧಿಸಿದಂತೆ ಯುವತಿಯ ಸಂಬಂಧಿಕರಾದ ರಾಜಪ್ಪ ಎಂಬುವರು ಬನ್ನೂರು ಪೋಲೀಸ್ ಠಾಣೆಯಲ್ಲಿ ದೂರು ನೀಡಿ, ತಮ ಮಗ ಕುಮಾರನೊಂದಿಗೆ ನಾಗೇಂದ್ರನ ಮನೆಗೆ ಹೋಗಿ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವತಿಯ ಬಗ್ಗೆ ಪ್ರಶ್ನಿಸಿದ್ದಾರೆ.
ಆಗ ನಾಗೇಂದ್ರ ಈ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದರಿಂದ ಕೆರಳಿದ ಅವರು ಕೊಲೆ ಬೆದರಿಕೆಯೊಡ್ಡಿ ಹೊರಟು ಹೋಗಿದ್ದಾರೆ. ನಂತರ ಬಿ.ಸೀಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಜೈ ಕುಮಾರ ಹಾಗು ಮಂಜು ಎಂಬುವರು ನಾಗೇಂದ್ರ ಮನೆಗೆ ಹೋಗಿ ಆತನನ್ನು ಬೈಕ್ ನಲ್ಲಿ ಕೂರಿಸಿಕೊಂಡು ತೋಟದ ಮನೆಗೆ ಕರೆದೊಯ್ದು ಕಂಬಕ್ಕೆ ಕಟ್ಟಿ ರಿಪೀಸ್ ಪಟ್ಟಿಯಿಂದ ಮನಸೋ ಇಚ್ಚೆ ಥಳಿಸಿ ಆತನ ಬಳಿ ಇದ್ದ ಎರಡು ಮೊಬೈಲ್ ಗಳನ್ನು ಕಿತ್ತುಕೊಂಡಿದ್ದಾರೆ ಎಂದು ಪೋಲೀಸರಿಗೆ ನೀಡಿರುವ ದೂರಿನಲ್ಲಿ ನಾಗೇಂದ್ರನ ತಾಯಿ ಮಂಜುಳ ತಿಳಿಸಿದ್ದಾರೆ.
ತೋಟದ ಮನೆಗೆ ಹೋದ ಮಂಜುಳಾ ತನ್ನಮಗನಿಗೆ ಹೊಡೆದ ಬಗ್ಗೆ ಪ್ರಶ್ನಿಸಿ ಅಂಕಿತಾ ಕಾಣೆಯಾದ ಬಗ್ಗೆ ಪೋಲೀಸರಿಗೆ ದೂರು ನೀಡಿದ್ದೀರಿ ಅವರು ಹುಡುಕುತ್ತಾರೆ. ನೀವ್ಯಾಕೆ ನನ್ನ ಮಗನಿಗೆ ಹೊಡೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಜೈಕುಮಾರ ಮತ್ತು ಮಂಜು ನಾವು ಗ್ರಾಮಕ್ಕೆ ಅಧ್ಯಕ್ಷರು ನಾವೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ಮಗನನ್ನು ಅಲ್ಲೇ ಬಿಟ್ಟು, ಈ ವಿಷಯ ಬೇರೆ ಕಡೆ ಬಾಯಿ ಬಿಟ್ಟರೆ ನಿಮನ್ನು ಸಾಯಿಸುತ್ತೇವೆ ಎಂದು ಬೆದರಿಕೆಯೊಡ್ಡಿ ನಾಳೆಯಿಂದ ನೀವು ಊರಿನಲ್ಲಿ ಇರುವಂತಿಲ್ಲ, ಮತ್ತೆ ಊರಲ್ಲಿ ನೋಡಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಇದರಿಂದ ಭಯಭೀತನಾದ ನಾಗೇಂದ್ರ ತಮ ಕೊಟ್ಟಿಗೆಯಲ್ಲಿ ನೇಣು ಬಿಗಿದು ಆತಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗನ ಸಾವಿಗೆ ಜೈಕುಮಾರ,ಮಂಜು,ಅಂಕಿತಾ ತಾಯಿ,ಅಂಕಿತಾ ದೊಡ್ಡಮ, ದೊಡ್ಡಮನ ಮಗ ಕಾರಣವೆಂದು ನಾಗೇಂದ್ರನ ತಾಯಿ ಮಂಜುಳಾ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬನ್ನೂರು ಠಾಣೆ ಪೋಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
