ಬೆಂಗಳೂರು, ಮೇ 25- ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ 4,002 ವಿವಿಧ ಹುದ್ದೆಗಳಿಗೆ ನಡೆಸಲಿರುವ ನೇಮಕಾತಿ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕುಶಲಕರ್ಮಿ, ತಾಂತ್ರಿಕ ಸಹಾಯಕ ಸೇರಿದಂತೆ 36 ಹುದ್ದೆಗಳಿಗೆ ಜುಲೈ 12,13 ಹಾಗೂ 14 ರಂದು ಸ್ಪರ್ಧಾತಕ ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಕರ್ನಾಟಕ ನೀರು ನಗರ ಸರಬರಾಜು ಮತ್ತು ಒಳಚರಂಡಿಯ ಸಹಾಯಕ ಇಂಜಿನಿಯರ್ (ಸಿವಿಲ್) ಪ್ರಥಮ ದರ್ಜೆ ಲೆಕ್ಕ ಸಹಾಯಕರು – ಗ್ರೂಪ್‌ಸಿ ಯ 64 ಹುದ್ದೆಗಳಿಗೆ ಆಗಸ್ಟ್ 11 ರಂದು ಪರೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿರ್ವಾಹಕ ದರ್ಜೆ 3 ಮೇಲ್ವಿಚಾರಕೇತರ 2,500 ಹುದ್ದೆಗಳಿಗೆ ಸೆಪ್ಟೆಂಬರ್ 1 ರಂದು ಹಾಗೂ ಪೊಲೀಸ್ ಇಲಾಖೆಯ 402 ಪಿಎಸ್‌ಐ ಹುದ್ದೆಗಳಿಗೆ ಸೆಪ್ಟೆಂಬರ್ 22 ರಂದು ಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಿದೆ.
ಕಂದಾಯ ಇಲಾಖೆಯ ಒಂದು ಸಾವಿರ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅಕ್ಟೋಬರ್ 27 ರಂದು ಪರೀಕ್ಷೆ ನಡೆಸಲಿದ್ದು, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಅನ್ವಯಿಸುವ ಹುದ್ದೆಗಳಿಗೆ ನಡೆಸಲಿರುವ ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಹೇಳಿದೆ.