Friday, November 22, 2024
Homeರಾಜ್ಯಮಟ್ಕಾ ಆಡಿಸುವವರಿಂದ ಪೊಲೀಸರ ಮಾಸಿಕ ಚಂದಾ ವಸೂಲಿ ದೃಢಪಟ್ಟರೆ ಸೇವೆಯಿಂದ ವಜಾ : ಪರಮೇಶ್ವರ್

ಮಟ್ಕಾ ಆಡಿಸುವವರಿಂದ ಪೊಲೀಸರ ಮಾಸಿಕ ಚಂದಾ ವಸೂಲಿ ದೃಢಪಟ್ಟರೆ ಸೇವೆಯಿಂದ ವಜಾ : ಪರಮೇಶ್ವರ್

ಬೆಂಗಳೂರು, ಮೇ 26- ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್‌‍ ಠಾಣೆ ದಾಂಧಲೆ ಪ್ರಕರಣವನ್ನು ಸಮಗ್ರ ತನಿಖೆಗೆ ವಹಿಸಲಾಗಿದ್ದು, ಮಟ್ಕಾ ದಂಧೆ ನಡೆಸುವವರಿಂದ ಮಾಸಿಕ ಹಣ ವಸೂಲಿ ಮಾಡುತ್ತಿರುವುದು ದೃಢಪಟ್ಟರೆ ಅಂತಹವರನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಮಟ್ಕಾ ಆಡಿಸುವವರಿಂದ ಮಾಸಿಕ ಹಣ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಎಲ್ಲಾ ವಿಚಾರವನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖಾ ವರದಿ ಬಂದ ನಂತರ ಕಾನೂನು ರೀತಿ ಕ್ರಮ ಜರುಗಿಸುತ್ತೇವೆ. ಈಗಾಗಲೇ ಠಾಣೆ ಇನ್ಸ್ ಪೆಕ್ಟರ್‌ ಹಾಗೂ ಡಿವೈಎಸ್ಪಿಯನ್ನು ಅಮಾನತು ಮಾಡಲಾಗಿದೆ ಎಂದರು.

ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿದೆ. ಮಟ್ಕಾ ಆಡಿಸುವುದರಲ್ಲಿ ಭಾಗಿಯಾಗಿದ್ದ ಎಂಬ ಆರೋಪದ ಮೇಲೆ ಠಾಣೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ವರದಿ ನಂತರ ತಿಳಿಯಲಿದೆ. ತನಿಖೆ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ :
ಶಾಸಕರೇ ಪೊಲೀಸ್‌‍ ಠಾಣೆಗೆ ನುಗ್ಗಿ ದಾಂಧಲೆ ಮಾಡುವುದು ಸರಿಯಲ್ಲ. ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಶಾಸಕರಿರಲಿ, ಸಂಸದರಿರಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಗೃಹಸಚಿವರು ಹೇಳಿದರು.

ರಾಜ್ಯದಲ್ಲಿ ಗೂಂಡಾ ವರ್ತನೆ, ದಾದಾಗಿರಿ, ಗೂಂಡಾಗಿರಿ ಮಾಡಲು ಅವಕಾಶವಿಲ್ಲ. ಒಂದು ವೇಳೆ ಅಂತಹ ಘಟನೆ ನಡೆದರೆ ಸಹಿಸುವುದಿಲ್ಲ. ಹತ್ತಿಕ್ಕುತ್ತೇವೆ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹಾಳಾಗಲು ಬಿಡುವುದಿಲ್ಲ ಎಂದರು.ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ಇದೆ. ಗುಜರಾತಿನಲ್ಲಿ ನಿನ್ನೆ ಸಂಭವಿಸಿರುವ ಅಗ್ನಿ ದುರಂತಕ್ಕೆ ಯಾರು ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದರು.

RELATED ARTICLES

Latest News