Monday, December 29, 2025
Homeಬೆಂಗಳೂರುಗ್ರಾಹಕರನ್ನು ನಂಬಿಸಿ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಸಾಲ ಪಡೆದು ವಂಚಿಸಿದ ಬ್ಯಾಂಕ್ ಮ್ಯಾನೇಜರ್‌..!

ಗ್ರಾಹಕರನ್ನು ನಂಬಿಸಿ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಸಾಲ ಪಡೆದು ವಂಚಿಸಿದ ಬ್ಯಾಂಕ್ ಮ್ಯಾನೇಜರ್‌..!

Bank manager taking out loans worth crores in customers names.

ಬೆಂಗಳೂರು, ಡಿ.29- ಬೇಲಿಯೇ ಎದ್ದು ಹೊಲ ಮೇಯ್ದಂತೆ ರಾಷ್ಟ್ರೀಕೃತ ಬ್ಯಾಂಕಿನ ಮ್ಯಾನೇಜರ್‌ ಒಬ್ಬರು ತಮ ಗ್ರಾಹಕರನ್ನು ನಂಬಿಸಿ ಅವರ ಹೆಸರಿನಲ್ಲಿ ಮೂರು ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ಚಿನ್ನಾಭರಣ ಅಡಮಾನ ಸಾಲ ಪಡೆದು, ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಲ್ಲೇಶ್ವರಂನ 15ನೇ ಕ್ರಾಸ್‌‍ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಲಕ್ಕಿ ಬಾಸ್ಕರ್‌ ಸಿನಿಮಾ ಶೈಲಿಯಲ್ಲಿ ಬಾರಿ ವಂಚನೆಯಾಗಿರುವುದು ಕಂಡು ಬಂದಿದೆ. ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರು ಕೋಟ್ಯಾಂತರ ರೂಪಾಯಿಗಳೊಂದಿಗೆ ನಾಪತ್ತೆಯಾಗಿದ್ದಾರೆ. ಚಿನ್ನವನ್ನೇ ಇಡದೇ 41 ಖಾತೆಗಳಿಂದ ಒಟ್ಟು 3,11,54,000 ಸಾಲ ಪಡೆದಿರುವುದು ಪತ್ತೆಯಾಗಿದೆ.

ಕೆನರಾ ಬ್ಯಾಂಕಿನ ಮಲ್ಲೇಶ್ವರಂ 15ನೇ ಕ್ರಾಸ್‌‍ನ ಶಾಖೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದ ಎನ್‌.ರಘು ತಮ ಬ್ಯಾಂಕಿನ ಗ್ರಾಹಕರಗಳನ್ನೇ ನಂಬಿಸಿ ಅವರಿಂದ ಖಾಲಿ ಚೆಕ್ಕುಗಳು ಮತ್ತು ಒಟಿಪಿಗಳನ್ನು ಪಡೆದು ಚಿನ್ನದ ಸಾಲ ಪಡೆದಿದ್ದಾರೆ.

ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ ನೀಡಿರುವ ಮಾಹಿತಿಯ ಪ್ರಕಾರ, ಅವರಿಗೆ ಕೆಲ ದಿನಗಳ ಹಿಂದೆ ಗೃಹ ಸಾಲ ಮಂಜೂರಾಗಿತ್ತು. ಅದೇ ವಿಶ್ವಾಸದ ಮೇಲೆ ಬ್ಯಾಂಕ್‌ ಮ್ಯಾನೇಜರ್‌ ರಘು ತಮ ತಂದೆಗೆ ಹುಷಾರಿಲ್ಲ ಎಂದು ಹೇಳಿ ಮೂರು ಲಕ್ಷ ರೂಪಾಯಿ ಖಾಸಗಿ ಸಾಲ ಪಡೆದುಕೊಂಡಿದ್ದರು. ಅದರಲ್ಲಿ 1.30 ಲಕ್ಷ ರೂಪಾಯಿ ವಾಪಸ್‌‍ ನೀಡಿದ್ದಾರೆ.

1.70ಲಕ್ಷಗಳನ್ನು ಕೊಡುವುದಾಗಿ ಹೇಳುತ್ತಲೇ ಕಾಲ ಹರಣ ಮಾಡಿದ್ದಾರೆ. ಈ ನಡುವೆ ಗ್ರಾಹಕರ ಬಳಿ ಬಂದ ರಘು, ತಮಗೆ ಹಣದ ಅವಶ್ಯಕತೆ ಹೆಚ್ಚಿದೆ. ನನ್ನ ತಾಯಿಯ ಚಿನ್ನವನ್ನು ನಿಮ ಖಾತೆಯಲ್ಲಿ ಇಟ್ಟು ಚಿನ್ನದ ಸಾಲ ಪಡೆದುಕೊಳ್ಳುತ್ತೇನೆ. ಆ ಸಾಲವನ್ನು ನಾನೇ ತೀರಿಸಿಕೊಳ್ಳುತ್ತೇನೆ. ಸಾಲ ಪಡೆಯಲು ಬ್ಯಾಂಕ್‌ ನಿಯಮಗಳ ಪ್ರಕಾರ ಖಾಲಿ ಚೆಕ್‌ ಗಳು ಮತ್ತು ಮೊಬೈಲ್‌ ನಂಬರ್‌ ಗೆ ಬರುವ ಒಟಿಪಿ ನೀಡುವಂತೆ ಮನವೊಲಿಸಿದ್ದಾರೆ.

ನಿಮದೇ ಖಾತೆಯಲ್ಲಿ ನೀವು ಚಿನ್ನ ಅಡಮಾನ ಮಾಡಿ ಸಾಲ ಪಡೆಯಬಹುದಲ್ಲ ಎಂದು ಗ್ರಾಹಕರು ಹೇಳಿದಾಗ. ನಾವು ಬ್ಯಾಂಕ್‌ ಅಧಿಕಾರಿಗಳಾಗಿರುವುದರಿಂದ ನಮದೇ ಬ್ಯಾಂಕಿನಲ್ಲಿ ಆ ರೀತಿ ವ್ಯವಹಾರ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಆ ರೀತಿ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನು ನಂಬಿದ ಗ್ರಾಹಕರು ಸಹಾಯ ಮಾಡಿದ್ದಾರೆ. ಗೃಹ ಸಾಲ ಪಡೆಯಲು ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ಚಿನ್ನದ ಸಾಲಕ್ಕೆ ಸಹಾಯ ಮಾಡಿದ್ದಾರೆ. ನೋಂದ ವ್ಯಕ್ತಿ ತಮ ತಾಯಿಯ ಹೆಸರಿನಲ್ಲಿದ್ದ ಖಾತೆಯ ಖಾಲಿ ಚೆಕ್‌ ಮತ್ತು ಮತ್ತು ತಾಯಿಯ ಮೊಬೈಲ್‌ ಗೆ ಬಂದ ಒಟಿಪಿಯನ್ನು ವ್ಯವಸ್ಥಾಪಕರಿಗೆ ನೀಡಿದ್ದಾರೆ. ಅದನ್ನು ಬಳಸಿಕೊಂಡು ರಘು ಅವರು ಒಬ್ಬರ ಖಾತೆಯಿಂದಲೇ 32 ಲಕ್ಷ ರೂಪಾಯಿಗಳ ಚಿನ್ನದ ಸಾಲ ಪಡೆದುಕೊಂಡಿದ್ದಾರೆ.

ಬ್ಯಾಂಕ್‌ ಗಳಲ್ಲಿ ಪ್ರತಿ ಮೂರು ತಿಂಗಳಿಗೆ ಒಮೆ ಚಿನ್ನದ ಸಾಲಗಳ ಮರು ಮೌಲ್ಯಮಾಪನ ನಡೆಯಲಿದೆ. ಆ ವೇಳೆ ಕೆನರಾ ಬ್ಯಾಂಕ್‌ ನಲ್ಲಿ 41 ಖಾತೆಗಳಿಂದ ಪಡೆಯಲಾಗಿದ್ದ ಚಿನ್ನದ ಸಾಲಕ್ಕೆ ಪ್ರತಿಯಾಗಿ ಬ್ಯಾಂಕಿನ ತಿಚೋರಿಯಲ್ಲಿ ಭೌತಿಕವಾಗಿ ಚಿನ್ನಾಭರಣ ಲಭ್ಯ ಇಲ್ಲದೆ ಇರುವುದು ಕಂಡು ಬಂದಿದೆ. ಇದರಿಂದ ಹೌಹಾರಿದ ಬ್ಯಾಂಕ್‌ ಲೆಕ್ಕ ಪರಿಶೋಧಕರು ಗ್ರಾಹಕರುಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಬಹಳಷ್ಟು ಮಂದಿ ಗ್ರಾಹಕರಿಗೆ ತಾವು ವಂಚನೆಗೆ ಒಳಗಾಗಿರುವುದು ಆಗ ಅರಿವಿಗೆ ಬಂದಿದೆ.

ಚಿನ್ನದ ಸಾಲ ಮಂಜೂರಾದ ವೇಳೆ ಮ್ಯಾನೆಜರ್‌ ರಘು ಅವರು ಗ್ರಾಹಕರ ಬೆನ್ನು ಬಿದ್ದು, ಸಾಲದ ಹಣವನ್ನು ತಮ ಖಾತೆಗೆ ತಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ವೈಯಕ್ತಿಕ ಕಷ್ಟಗಳನ್ನು ಹೇಳಿಕೊಂಡಿದ್ದರಿಂದ ಗ್ರಾಹಕರು ಅನುಕಂಪದಿಂದ ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.

ಬ್ಯಾಂಕಿನಲ್ಲಿ ಲೆಕ್ಕಪರಿಶೋಧನೆ ಮಾಡಿದ ವೇಳೆಯಲ್ಲಿ ಕಳೆದ ಅಕ್ಟೋಬರ್‌ 4 ರಿಂದ ಡಿಸೆಂಬರ್‌ 9 ರವರೆಗೆ ಈ ರೀತಿ 3.11 ಕೋಟಿ ರೂಪಾಯಿ ವಂಚನೆ ಆಗಿರಬಹುದು ಪತ್ತೆಯಾಗಿದೆ. ಈ ಬಗ್ಗೆ ಎನ್‌ ರಘು ಅವರನ್ನು ಡಿಸೆಂಬರ್‌ 10 ರಂದು ವಿಚಾರಿಸಿದಾಗ ಅವರು, ತಮ ತಪ್ಪನ್ನು ಒಪ್ಪಿಕೊಂಡಿದ್ದರು. ಆದರೆ ಮಾರನೇ ದಿನ ಯಾವುದೇ ಮಾಹಿತಿ ನೀಡದೆ ಬ್ಯಾಂಕ್‌ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ.

ಕೆನರಾ ಬ್ಯಾಂಕಿನ ಕೇಂದ್ರ ಕಚೇರಿಯ ಹಿರಿಯ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ. ಮಲ್ಲೇಶ್ವರಂ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ಗ್ರಾಹಕರಿಗೆ ಅಪಾರವಾದ ವಿಶ್ವಾಸ ಇದೆ. ಅಲ್ಲಿಯೂ ಕೂಡ ಈ ರೀತಿ ವಂಚನೆಗಳಾದರೆ ಇನ್ನು ಯಾರನ್ನು ನಂಬುವುದು ಎಂಬ ಪ್ರಶ್ನೆಯನ್ನು ಗ್ರಾಹಕರನ್ನು ಕಾಡಲಾರಂಭಿಸಿದೆ.

RELATED ARTICLES

Latest News