Friday, November 22, 2024
Homeಜಿಲ್ಲಾ ಸುದ್ದಿಗಳು | District Newsಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥದಲ್ಲಿ ನಾಗರ ಹಾವುಗಳ ದರ್ಶನ, ಭಕ್ತರಲ್ಲಿ ಅಚ್ಚರಿ

ಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥದಲ್ಲಿ ನಾಗರ ಹಾವುಗಳ ದರ್ಶನ, ಭಕ್ತರಲ್ಲಿ ಅಚ್ಚರಿ

ಗೌರಿಬಿದನೂರು, ಮೇ 27- ಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥದಲ್ಲಿ ನಾಗರ ಕಲ್ಲುಗಳ ಮುಂದೆ ಎರಡು ನಾಗರ ಹಾವುಗಳು ಹೆಡೆ ಎತ್ತಿ ಕಾಣಿಸಿಕೊಂಡಿದ್ದು, ಭಕ್ತಾಧಿಗಳಲ್ಲಿ ಆಶ್ಚರ್ಯಚಕಿತರನ್ನಾಗಿಸಿದೆ.

ವಿದುರಾಶ್ವತ್ಥ ಕ್ಷೇತ್ರದಲ್ಲಿ ಪ್ರಾತಃಕಾಲದ ಸಮಯ 5-30ರಲ್ಲಿ ನಾಗರ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲು ಭೂಮಿ ಪೂಜೆ ಮಾಡಲು ಕ್ಷೇತ್ರದ ಅರ್ಚಕರಾದ ಅಶ್ವತ್ಥನಾರಾಯಣ ಪ್ರಸಾದ್‌, ನಾಗೇಂದ್ರ ಶಾಸಿಗಳು ಭೂಮಿ ಪೂಜೆ ಮಾಡಲು ಮುಂದಾದ ಸಂದರ್ಭದಲ್ಲಿ ನಾಲ್ಕು ನಾಗರ ಹಾವುಗಳ ಮರಿಗಳು ಕಾಣಿಸಿಕೊಂಡಿದ್ದು, ಇದರಲ್ಲಿ ಎರಡು ಮರಿಗಳು ಹರಿದು ಹೋಗಿದ್ದು, ಉಳಿದೆರಡು ಮರಿಗಳು ಹೆಡೆಯನ್ನು ಬಿಚ್ಚಿ ಕೆಲಕಾಲ ಭಕ್ತಾಧಿಗಳಿಗೆ ದರ್ಶನ ಭಾಗ್ಯವನ್ನು ನೀಡಿವೆ.

ಬೆಂಗಳೂರಿನಿಂದ ಆಗಮಿಸಿದ್ದ ಮೇಘನ ದಂಪತಿಗಳು ನಾಗರ ಪ್ರತಿಷ್ಠಾಪನೆಗೆ ಮುಂದಾಗಿದ್ದ ಸಂದರ್ಭದಲ್ಲಿ ಈ ಅಪರೂಪದ ಘಟನೆ ನಡೆದಿದೆ.

ಕ್ಷೇತ್ರದ ಹಿನ್ನೆಲೆ:
ವಿದುರಾಶ್ವತ್ಥ ಕ್ಷೇತ್ರವು ಮಹಾಭಾರತದ ಕಾಲದಲ್ಲಿ ವಿದುರನು ಇಲ್ಲಿಗೆ ಬಂದು ತಪ್ಪಸ್ಸು ಮಾಡಿದ್ದು, ಒಂದು ದಿನ ಇಲ್ಲಿನ ಉತ್ತರ ಪಿನಾಕಿನಿ ನದಿಯಲ್ಲಿ ಪ್ರಾತಃಕಾಲದಲ್ಲಿ ಸಂಧ್ಯಾವಂದನೆ ಮಾಡುವ ಸಮಯದಲ್ಲಿ ಕಾಷ್ಟಕ (ಅರಳಿ ವೃಕ್ಷದ ಕಡ್ಡಿ) ಕೈಗೆ ಸಿಕ್ಕಿದ್ದು, ಅದನ್ನು ಮಹಾಪ್ರಸಾದವೆಂದು ವಿದುರನು ವಿದುರಾಶ್ವತ್ಥದಲ್ಲಿ ನೆಟ್ಟಿರುವುದಾಗಿ ಇತಿಹಾಸ ಹೇಳುತ್ತಿದೆ.

ಆ ಅರಳಿ ವೃಕ್ಷವು ಇಂದು ಬೃಹದಾಕಾರವಾಗಿ ಬೆಳೆದು ಇದರಡಿಯಲ್ಲಿ ಶ್ರೀ ಅಶ್ವತ್ಥನಾರಾಯಾಣ ಸ್ವಾಮಿ ಸನ್ನಿದಿಯೂ ಇದೆ, ಈ ಕ್ಷೇತ್ರದಲ್ಲಿ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಿ ಮಕ್ಕಳು ಆಗದವರು, ಮದುವೆಯಾಗದವರು ನಾಗರ ಕಲ್ಲುಗಳನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ಪ್ರತೀತಿ ಹಾಗೂ ಅಪಾರ ನಂಬಿಕೆ ಇದೆ. ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಸಾವಿರಾರು ನಾಗರ ಕಲ್ಲುಗಳು ಹಿಂದಿನಿಂದಲೂ ಪ್ರತಿಷ್ಠವಾಗಿರುವುದು ವಿಶೇಷವಾಗಿದೆ.

ಭಕ್ತಸಾಗರ:
ವಿದುರಾಶ್ವತ್ಥ ಕ್ಷೇತ್ರದಲ್ಲಿ ಎರಡು ನಾಗರಹಾವುಗಳ ಮರಿಗಳು ನಾಗರ ಕಲ್ಲುಗಳ ಮುಂದೆ ಹೆಡೆಬಿಚ್ಚಿ ನಿಂತಿರುವುದನ್ನು ನೋಡಲು ಭಕ್ತಾದಿಗಳು ಮುಗಿಬಿದ್ದರು, ಶ್ರದ್ಧಾ-ಭಕ್ತಿಯಿಂದ ನಾಗೇಂದ್ರನೇ ಬಂದಿದ್ದಾನೆ ಎಂದು ಭಕ್ತರು ನಮಸ್ಕರಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು. ಕೆಲ ಸಮಯದ ನಂತರ ಎರಡು ನಾಗರಹಾವಿನ ಮರಿಗಳು ಹಿಂದೆ ಸರಿದು ನಾಗರ ಕಲ್ಲುಗಳ ಮದ್ಯ ಹೋದವು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.

ವಿದುರಾಶ್ವತ್ಥದಲ್ಲಿ ನಾಗರ ಹಾವುಗಳು ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತವೆ, ಎಷ್ಟೋ ಭಾರಿ ಶ್ರೀ ಅಶ್ವತ್ಥನಾರಾಯಣ ಸ್ವಾಮಿ ಗರ್ಭಗುಡಿಯ ಬಾಗಿಲು ತೆರೆದ ಸಂದರ್ಭದಲ್ಲೂ ನಾಗರ ಹಾವುಗಳು ಕಾಣಿಸಿಕೊಂಡಿವೆ. ಆದರೆ ಇದೇ ಮೊದಲ ಬಾರಿಗೆ ನಾಗರ ಹಾವಿನ ಮರಿಗಳು ಹೆಡೆಬಿಚ್ಚಿ ಕಾಣಿಸಿವೆ ಎಂದುವಿದುರಾಶ್ವತ್ಥ ಕ್ಷೇತ್ರದ ಅರ್ಚಕರಾದ ಅಶ್ವತ್ಥನಾರಾಯಣ ಪ್ರಸಾದ್‌ ತಿಳಿಸಿದ್ದಾರೆ.

RELATED ARTICLES

Latest News