ಬೆಂಗಳೂರು, ಮೇ 27- ಕಳಪೆ ಔಷಧ ಪೂರೈಸಿ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಜಾಲದ ವಿರುದ್ಧ ಈ ಕೂಡಲೇ ಸರ್ಕಾರ ಕಾರ್ಯಾಚರಣೆ ಆರಂಭಿಸದಿದ್ದರೆ ನಾಗರಿಕ ಸಮಾಜದ ಸುಭದ್ರತೆಗಾಗಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರೇವ್ ಪಾರ್ಟಿಗಳು ಹಾಗೂ ಹಾದಿ-ಬೀದಿಗಳಲ್ಲಿ ಡ್ರಗ್ಸ್ ಮಾಫಿಯಾ ಜಾಲ ಹರಡುತ್ತಿರುವುದರ ವಿರುದ್ಧ ತತ್‌ಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮೇರೆ ಮೀರಿರುವ ಕ್ರಿಮಿನಲ್ ಚಟುವಟಿಕೆಗಳ ಬೆನ್ನಲೇ ನಿಷೇಧಿತ ಡ್ರಗ್ಸ್ ಮಾದರಿಯ ಮಾತ್ರೆಗಳ ಮಾರಾಟದ ದಂಧೆ ಅನೇಕ ಔಷಧ ಮಳಿಗೆಗಳಲ್ಲೇ ರಾಜಾರೋಷವಾಗಿ ನಡೆಯುತ್ತಿದ್ದು ಡ್ರಗ್ಸ್ , ಗಾಂಜಾ ಪದಾರ್ಥಗಳ ವಹಿವಾಟೂ ಸಹ ಎಗ್ಗಿಲ್ಲದೆ ನಡೆಯುತ್ತಿದೆ, ಇದರ ಪರಿಣಾಮವಾಗಿ ಇಬ್ಬರು ಅಮಾಯಕರು ಡ್ರಗ್ಸ್ ವ್ಯಸನಿಯೊಬ್ಬನಿಂದ ಕೊಲೆಗೀಡಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯಗೊಂಡಿರುವ ಕಾನೂನು ಸುವ್ಯವಸ್ಥೆಯ ನೆರಳಿನಲ್ಲಿ ಬೆಳಕಿಗೆ ಬಾರದ ಅದೆಷ್ಟು ಜನರು ಡ್ರಗ್ಸ್ ಜಾಲಕ್ಕೆ ಸಿಲುಕಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೋ ಎಂಬ ಆತಂಕದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಸಮರ್ಥತೆಯಿಂದಾಗಿ ಕಾಳಸಂತೆಕೋರರು, ಕೊಲೆಗಡುಕರ ಹಾಗೂ ಡ್ರಗ್ಸ್ ಮಾಫಿಯಾದ ಚಟುವಟಿಕೆಗಳು ಸ್ವೇಚ್ಛೆಯಾಗಿ ನಡೆಯುತ್ತಿದೆ.ಸಮಾಜ ಹಾಗೂ ದೇಶದ ಭವಿಷ್ಯ ಬೆಳಗಬೇಕಾದ ವಿದ್ಯಾರ್ಥಿಗಳು, ಯುವಜನರನ್ನು ದಿಕ್ಕು ತಪ್ಪಿಸುವ ವಿದೋಹಿ ಮಾಫಿಯಾ ಶಕ್ತಿಗಳು ರಾಜ್ಯದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬರುತ್ತಿದ್ದು, ಈ ಸರ್ಕಾರ ಪ್ರಜೆಗಳಿಗೆ ಯಾವ ಭಾಗ್ಯ ಕರುಣಿಸುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಜೀವರಕ್ಷಣೆಯ ಭಾಗ್ಯವನ್ನಾದರೂ ಕಲ್ಪಿಸಿ ನಾಗರಿಕ ಸಮಾಜದಲ್ಲಿ ಸುರಕ್ಷತಾ ಭಾವ ಮೂಡಿಸಲಿ. ಆ ಮೂಲಕ ಜನರ ಶಾಪದಿಂದ ಮುಕ್ತಿ ಕಾಣಲಿ ಎಂದು ವಿಜಯೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.