ಬೆಂಗಳೂರು, ಮೇ 27- ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಇಂದು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದಿದ್ದಾರೆ. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ನಂತರ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುವುದನ್ನು ರೇವಣ್ಣ ಮುಂದುವರೆಸಿದ್ದಾರೆ.
ಮಹಿಳೆಯೊಬ್ಬರ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಗಳಲ್ಲಿ ರೇವಣ್ಣ ಅವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲೂ ಪಾಲ್ಗೊಂಡಿದ್ದರು.ಕುಟುಂಬದ ಸದಸ್ಯರಿಲ್ಲದೆ, ಒಬ್ಬರೇ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿರುವುದು ವಿಶೇಷವಾಗಿದೆ.
ಕಳೆದ ಶುಕ್ರವಾರ ಕಲಬುರಗಿಯ ಗಾಣಗಾಪುರದಲ್ಲಿರುವ ಪ್ರಸಿದ್ಧ ದತ್ತಾತ್ರೇಯ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಬೆಂಗಳೂರಿನ ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿದ್ದು, 25 ವರ್ಷಗಳಿಂದ ಶಾಸಕನಾಗಿ ಜನರ ಸೇವೆ ಮಾಡುತ್ತಿದ್ದೇನೆ. ಪ್ರಗತಿಪರ ಚಿಂತಕರ ವೇದಿಕೆಯಿಂದ ಹಾಸನ ಚಲೋ ಪ್ರತಿಭಟನೆ ನಡೆಸುತ್ತಿರುವುದು ಗೊತ್ತಿಲ್ಲ. ತಮ ಮೇಲಿನ ಆರೋಪ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮಂಜುನಾಥಸ್ವಾಮಿ ಮೇಲೆ ನಮಗೆ ನಂಬಿಕೆ ಇದೆ. ಹಾಗೆಯೇ ರಾಜ್ಯದ ಜನರ ಮೇಲೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.