ಬೆಂಗಳೂರು,ಡಿ.29- ರಾಜಧಾನಿ ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವು ಗೊಳಿಸಿದ ನಂತರ ಹೊಸದಾಗಿ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಕಾರಿದೆ.
ಈ ಹಿಂದೆ ರಾಜ್ಯದ ನಾನಾ ಕಡೆ ಕಾನೂನುಬಾಹಿರವಾಗಿ ಸರ್ಕಾರಿ ಜಾಗದಲ್ಲಿ ಮನೆಗ ಳನ್ನು ನಿರ್ಮಿಸಿದಾಗ ಸರ್ಕಾರ ಬುಲ್ಡೋಜರ್ ಮೂಲಕವೇ ತೆರವುಗೊಳಿಸಿತ್ತು. ಅಂದು ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಟ್ಟಿರಲಿಲ್ಲ. ಈಗ ಏಕಾಏಕಿ ಮನೆಗಳನ್ನು ನಿರ್ಮಿಸಿ ಕೊಡಲು ಮುಂದಾಗಿರುವ ಸರ್ಕಾರದ ಔಚಿತ್ಯವೇನು ಎಂದು ಪ್ರಶ್ನೆ ಮಾಡಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್, ಶಾಸಕ ಸುನೀಲ್‌ಕುಮಾರ್, ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಅನೇಕರು ಸರಕಾರದ ಕ್ರಮಕ್ಕೆ ಆಸಮಾಧಾನ ವ್ಯಕ್ತಪಡಿಸಿದ್ದಾರೆ.ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಸರ್ಕಾರದ ವಿರುದ್ದ ಪೋಸ್ಟ್ ಮಾಡಿರುವ ಬಿಜೆಪಿ ನಾಯಕರು, ಇದು ಕುರ್ಚಿ ಉಳಿಸಿಕೊಳ್ಳುವ ಹಾಗೂ ಕೇರಳದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸಿಕೊಳ್ಳುವ ಕಸರತ್ತು ಎಂದು ವಾಗ್ದಾಳಿ ನಡೆಸಿದೆ.
ಹೋರಾಟ ಅನಿವಾರ್ಯ
ಬೆಂಗಳೂರಿನ ಕೋಗಿಲು ಬಡಾವಣೆಯ ಅಕ್ರಮ ನಿವಾಸಿಗಳ ತೆರವುಗೊಳಿಸಿರುವ ಕ್ರಮ ಕೈಗೊಂಡಿರುವ ಕ್ರಮವನ್ನು ಉಪ ಮುಖ್ಯಮಂತ್ರಿ ಡಿ..ಶಿವಕುಮಾರ್ ಅವರು ಸಮರ್ಥಿಸಿಕೊಂಡು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಹೇಳಿಕೆಯನ್ನು ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದರು, ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಹೇಳಿಕೆಗೆ ಮಣಿದಂತೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್ ರವರ ಊಸರವಳ್ಳಿ ಬಣ್ಣದ ಮಾತುಗಳು ಕರ್ನಾಟಕದ ಸ್ವಾಭಿಮಾನದ ಘನತೆಯನ್ನು ಕುಗ್ಗಿಸಿವೆ ಎಂದು ವಿಜಯೇಂದ್ರ ವಾಗ್ದಳಿ ನಡೆಸಿದ್ದಾರೆ.
ಮುಂಬರುವ ಕೇರಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇರಳ ಮೂಲದ ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಿದ್ದೇವೆಂಬುದನ್ನು ಸಾಕ್ಷೀಕರಿಸುವ ನಿಟ್ಟಿನಲ್ಲಿ ಕೋಗಿಲು ಬಡಾವಣೆಯ ಪ್ರಕರಣವನ್ನು ಎ.ಐ.ಸಿ.ಸಿ ಗಂಭೀರವಾಗಿ ಪರಿಗಣಿಸಿದೆ.ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಕಲ್ಪಿಸಿಕೊಡುವ ಭರವಸೆ ನೀಡುವ ಹೇಳಿಕೆ ಬಿಡುಗಡೆ ಮಾಡಿರುವುದನ್ನು ಗಮನಿಸಿದರೆ ಕೇರಳ ಚುನಾವಣಾ ರಾಜಕೀಯಕ್ಕೆ ಕರ್ನಾಟಕದ ಹಿತಾಸಕ್ತಿ ಬಲಿಕೊಡಲು ಕಾಂಗ್ರೆಸ್ ಹೈ ಕಮಾಂಡ್ ಸಿದ್ದವಾದಂತೆ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅಂದಿನ ವಯನಾಡ್ ಸಂಸದ ಪ್ರಿಯಾಂಕ ವಾದ್ರ ಅವರನ್ನು ಖುಷಿಪಡಿಸಲು ಕೇರಳದಲ್ಲಿ ಆನೆ ದಾಳಿಗೊಳಗಾದವರು ಹಾಗೂ ನೆರೆ ಹಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಮನೆ ಕಟ್ಟಿಕೊಡುವ ಕಾರ್ಯದಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಹಂತದಲ್ಲೂ ಕರ್ನಾಟಕದಲ್ಲಿ ಕೇರಳ ದರ್ಬಾರ್ ನಡೆಯಲು ಅವಕಾಶ ಮಾಡಿಕೊಡುತ್ತಿರುವುದು ಕನ್ನಡಿಗರ ಸ್ವಾಭಿಮಾನವನ್ನು ಅಡವಿಟ್ಟಂತಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಹೈಕಮಾಂಡ್ ಒತ್ತಡಗಳಿಗೆ ಮಣಿದು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಟ್ಟರೆ, ಅಲ್ಪಸಂಖ್ಯಾತರ ಹೆಸರಿನಲ್ಲಿ ಕೋಗಿಲು ಬಡಾವಣೆಯಲ್ಲಿ ರಾಜಕೀಯ ಓಲೈಕೆಯ ಚಟುವಟಿಕೆ ಮುಂದುವರೆದರೆ ಅದು ಕರ್ನಾಟಕದ ಸ್ವಾಭಿಮಾನ ಹಾಗೂ ಈ ನೆಲದ ಕಾನೂನನ್ನು ಬಲಿಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ವ್ಯತಿರಿಕ್ತವಾಗಿ ನಡೆದುಕೊಂಡರೆ ಕನ್ನಡಿಗರ ಪ್ರತಿಭಟನೆ ಎದುರಿಸಲು ಸಿದ್ದವಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪೊಕರ್ನಾಟಕದ ಆಡಳಿತದಲ್ಲಿ ಮಧ್ಯಪ್ರವೇಶಿಸಲು ಕೆ.ಸಿ ವೇಣುಗೋಪಾಲ್ ಯಾರು? ಅವರು ಸೂಪರ್ ಸಿಎಂ ಆಗಿದ್ದಾರಯೇ? ಅಥವಾ ಕಾಂಗ್ರೆಸ್ ಹೈಕಮಾಂಡ್ ಚುನಾಯಿತ ರಾಜ್ಯ ಸರ್ಕಾರಗಳು ದೆಹಲಿಯ ಆಜ್ಞೆಗಳ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದು ನಂಬುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕವನ್ನು ಸಾಂವಿಧಾನಿಕವಾಗಿ ಚುನಾಯಿತ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟವು ಆಳುತ್ತದೆ. ಪಕ್ಷದ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಒಂದು ವಿಷಯ, ರಾಜ್ಯ ಸರ್ಕಾರದ ಮೇಲೆ ನೈತಿಕ ಧರ್ಮೋಪದೇಶಗಳು ಮತ್ತು ಒತ್ತಡ ತಂತ್ರಗಳನ್ನು ನೀಡುವುದು ಸ್ಪಷ್ಟ ಅತಿಕ್ರಮಣ ಮತ್ತು ಒಕ್ಕೂಟಕ್ಕೆ ಎಸಗುವ ಅವಮಾನ.
ಕೇರಳದ ವೈದ್ಯಕೀಯ ಮತ್ತು ಇತರ ತ್ಯಾಜ್ಯಗಳನ್ನು ಕರ್ನಾಟಕದ ಗಡಿಗಳಲ್ಲಿ ಅಕ್ರಮವಾಗಿ ಸುರಿಯಲಾಗಿದ್ದು, ಬಂಡೀಪುರ, ಅರಣ್ಯ ಪ್ರದೇಶಗಳು, ಸಾರ್ವಜನಿಕ ಆರೋಗ್ಯ ಮತ್ತು ವನ್ಯಜೀವಿಗಳಿಗೆ ಬೆದರಿಕೆ ಹಾಕಿದಾಗ ಕೆ.ಸಿ.ವೇಣುಗೋಪಾಲ್ ಎಂದಾದರೂ ಅದೇ ತುರ್ತುಸ್ಥಿತಿಯನ್ನು ತೋರಿಸಿದ್ದಾರೆಯೇ? ಅವರು ಕರ್ನಾಟಕದ ಪರಿಸರ, ರೈತರು ಅಥವಾ ಗಡಿ ಜಿಲ್ಲೆಗಳ ಪರವಾಗಿ ಅದೇ ಕಾಳಜಿ ಮತ್ತು ಸಹಾನುಭೂತಿಯೊಂದಿಗೆ ಮಾತನಾಡಿದ್ದಾರೆಯೇ? ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ನಡೆಸುತ್ತಿರುವುದು ಯಾರು?
ಮಾಜಿ ಸಚಿವ ಹಾಗೂ ಶಾಸಕ ಸುನೀಲ್‌ಕುಮಾರ್ ಕೂಡಾ ಪೋಸ್ಟ್ ಮಾಡಿದ್ದು, ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವುದು ಕನ್ನಡಿಗರೋ, ಕೇರಳಿಗರೋ? ಅಧಿಕಾರ ಹಸ್ತಾಂತರದ ಗೊಂದಲದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮುಳುಗಿ ಮೈಮರೆತಿರುವಾಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಮ ರಾಜ್ಯದಲ್ಲಿ ಆಡಳಿತ ಹೇಗಿರಬೇಕೆಂದು ಡಿಕ್ಟೇಟ್ ಮಾಡುತ್ತಾರೆ ಎಂದು ಕಟಕಿಯಾಡಿದ್ದಾರೆ.
ಅದನ್ನು ನೋಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲಯಾಳಿ ಕೆ.ಸಿ.ವೇಣುಗೋಪಾಲ್ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಇದಾದ ಬಳಿಕ ಕೋಗಿಲು ಕ್ರಾಸ್ ಬಳಿ ಅಕ್ರಮ ವಲಸಿಗರು ರಚಿಸಿಕೊಂಡಿದ್ದ ಲೇಔಟ್ ತೆರವು ಮಾಡಿದ್ದ ಬಗ್ಗೆ ಸಿಎಂ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡುತ್ತಾರೆ. ಎಲ್ಲ ಕುರ್ಚಿ ಮೋಹ, ಕೇರಳ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ವೋಟು ದಕ್ಕಿಸಿಕೊಳ್ಳಬೇಕೆಂಬ ದಾಹ. ಈ ಹಿಂದೆ ವಯನಾಡಿನಲ್ಲಿ ಆನೆ ದಾಳಿಗೆ ಮೃತಪಟ್ಡವರಿಗೆ 30 ಲಕ್ಷ ರೂ. ಪರಿಹಾರ ನೀಡಿದ್ದ ಸರ್ಕಾರ ಈಗ ಕೇರಳ ಚುನಾವಣೆ ಕಾರಣಕ್ಕೆ ರಾಜ್ಯದ ಮರ್ಯಾದೆಯನ್ನೇ ಬೀದಿ ಪಾಲು ಮಾಡಿದೆ ಎಂದು ಕಿಡಿಕಾರಿದ್ದಾರೆ.
ಎಲ್ಲಿ ಹೋಯಿತೋ ಸ್ವಾಭಿಮಾನ
ಮಾಜಿ ಸಚಿವ ಬಿ ಶ್ರೀರಾಮುಲು, ಕರ್ನಾಟಕದ ಆಡಳಿತದಲ್ಲಿ ಮೂಗು ತೂರಿಸಲು ವೇಣುಗೋಪಾಲ್ ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಅವರು ಓರ್ವ ಸಂಸದರೋ ಅಥವಾ ಸೂಪರ್ ಸಿಎಂ? ಒಂದೇ ಒಂದು ಟ್ವಿಟ್ ಗೆ ಇಲ್ಲಿನ ಸರಕಾರದ ಮುಖ್ಯಸ್ಥರು ಇಷ್ಟೊಂದು ಹೆದರುವ ಅಗತ್ಯವಿತ್ತಾ?ಎಲ್ಲಿ ಹೋಯಿತೋ ನಿಮ ಸ್ವಾಭಿಮಾನ? ನಾಯಕತ್ವ ಬದಲಾವಣೆ ಕೂಗು ಕೇಳುತ್ತಿರುವಾಗವೇಣುಗೋಪಾಲ್ ಓಲೈಸಿಕೊಂಡರೆ, ಕುರ್ಚಿ ಇನ್ನಷ್ಟು ಗಟ್ಟಿಯಾಗಲಿದೆ ಎಂಬ ದುರಲೋಚನೆ ಇದೆಯಾ? ಸಿದ್ದರಾಮಯ್ಯನವರೇ? ನಿಮ ಸ್ವಾರ್ಥಕ್ಕಾಗಿ ಕನ್ನಡಿಗರ ಸ್ವಾಭಿಮಾನವನ್ನು ದಯವಿಟ್ಟು ಅಡವಿಡಬೇಡಿ.ಹೊರ ರಾಜ್ಯದಿಂದ ಬಂದು ಕಾನೂನುಬಾಹಿರವಾಗಿ ಸರ್ಕಾರಿ ನಿವೇಶನದಲ್ಲಿ ಮನೆ ಕಟ್ಟಿಸಿಕೊಂಡರೆ ಸರಕಾರ ಕೈಕಟ್ಟಿ ಕೂರಬೇಕಿತ್ತಾ? . ಈ ಹಿಂದೆ ಅನೇಕರ ಮನೆಗಳನ್ನು ತೆರೆವುಗೊಳಿಸಿದಾಗ ಅಂದು ಇಲ್ಲದ ಮಾನವೀಯತೆ ,ಈಗ ಏಕಾಏಕಿ ಬಂದಿದ್ದಾರೋ ಏಕೆ? ಎಲ್ಲವೂ ಕುರ್ಚಿಯ ಮೋಹ! ಎಂದು ವ್ಯಂಗ್ಯವಾಡಿದ್ದಾರೆ.
