ಬೆಂಗಳೂರು, ಮೇ 29- ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ನಿರೀಕ್ಷೆಯಂತೆ ಸಕಾಲಕ್ಕೆ ಅರಂಭವಾಗಲಿದ್ದು, ಜೂನ್‌ತಿಂಗಳಿನಲ್ಲಿ ವಾಡಿಕೆಗಿಂತಲೂ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ.
ಕಳೆದ ಮೂರು, ನಾಲ್ಕು ದಿನಗಳಿಂದ ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ. ಕರಾವಳಿ ಹೊರತುಪಡಿಸಿ ಉಳಿದೆಡೆ ಮಳೆಯಾಗುತ್ತಿಲ್ಲ. ನಿರೀಕ್ಷೆಯಂತೆ ಮಳೆ ಬಿಡುವುಕೊಟ್ಟಿದ್ದು, ಜೂನ್ ಮೊದಲ ವಾರದಲ್ಲಿ ಮತ್ತೆ ಮಳೆ ಆರಂಭಗೊಳ್ಳಲಿದೆ.
ಭಾರತೀಯ ಹವಾಮಾನ ಇಲಾಖೆ ಈಗಾಗಲೇ ನೀಡಿರುವ ಮುನ್ಸೂಚನೆಯಂತೆ ಮೇ 31ರವೇಳೆಗೆ ಮುಂಗಾರು ಮಳೆ ಕೇರಳಕ್ಕೆ ಪ್ರವೇಶಿಸಲಿದೆ. ಮುಂಗಾರು ಪ್ರಾರಂಭಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ರೆಮೆಲ್ ಚಂಡಮಾರುತದಿಂದ ಮುಂಗಾರಿನ ಮೇಲೆ ಪ್ರತಿಕೂಲ ಪರಿಣಾಮವಾಗಿಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕೇರಳದ ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ನಾಳೆಯಿಂದ ಮಳೆ ಪ್ರಮಾಣ ಹೆಚ್ಚಾಗಲಿದ್ದು, ಶುಕ್ರವಾರ ಮುಂಗಾರಿನ ಆಗಮನವಾಗಲಿದೆ. ಅದಕ್ಕೆ ಅಡ್ಡಿಯಾಗುವಂತಹ ಸನ್ನಿವೇಶಗಳು ಈತನಕ ಕಂಡುಬಂದಿಲ್ಲ ಎಂದು ಹೇಳಿದ್ದಾರೆ.
ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದ ಬಳಿಕ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ವ್ಯಾಪಿಸಲಿದೆ. ಚಾಮರಾಜನಗರದ ಮೂಲಕ ರಾಜ್ಯಕ್ಕೆ ಮುಂಗಾರು ಆಗಮನವಾಗಲಿದೆ. ಜೂನ್ ಐದರವೇಳೆಗೆ ದಕ್ಷಿಣ ಕರ್ನಾಟಕವನ್ನು ಮುಂಗಾರು ಆವರಿಸಲಿದ್ದು, ಜೂನ್ 10ರ ವೇಳೆಗೆ ರಾಜ್ಯಾದ್ಯಂತ ವ್ಯಾಪಿಸಲಿದ್ದು, ವ್ಯಾಪಕ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ತಿಳಿಸಿದ್ದಾರೆ.
ಮುಂಗಾರು, ಹಿಂಗಾರು, ಬೇಸಿಗೆ ಮಳೆ ಕೊರತೆಯಿಂದ ತೀವ್ರ ಬರಗಾಲ ಆವರಿಸಿದ್ದ ರಾಜ್ಯದಲ್ಲಿ ಮೇನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಪೂರ್ವ ಮುಂಗಾರು ಮಳೆಯಾದ್ದರಿಂದ ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರೆ, ಜಾನುವಾರುಗಳಿಗೆ ಸಾಕಷ್ಟು ಮೇವು ದೊರೆತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಬಾರಿಯ ಮುಂಗಾರು ಕಳೆದ ಬಾರಿಯಂತೆ ಕೈಕೊಡದೆ, ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ನಾಳೆಯ ನಂತರ ಮತ್ತೆ ಮಳೆ ಆರಂಭಗೊಳ್ಳುವ ಸಾಧ್ಯತೆಗಳಿವೆ. ವಾರಾಂತ್ಯಕ್ಕೆ ಮತ್ತೊಂದು ಸುತ್ತಿನ ಮಳೆ ಪ್ರಾರಂಭವಾಗಲಿದೆ.