ಬೆಂಗಳೂರು, ಮೇ 30– ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆನ್ನಲಾದ ಅತ್ಯಾಚಾರ ಆರೋಪ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಮಧ್ಯರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ನಿಲ್ದಾಣದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಅವರನ್ನು ಕರೆತರುವ ಏರ್‌ಪೋರ್ಟ್ ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಅವರು ಇಂದು ಬೆಳಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿ ಮಾಡಿ ಬಂದೋಬಸ್ತ್ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪ್ರಜ್ವಲ್ ಅವರನ್ನು ಬಂಧಿಸಲು ಎಸ್‌ಐಟಿ ತಂಡ ಸಜ್ಜಾಗಿದೆ. ಹಿರಿಯ ಅಧಿಕಾರಿ ನೇತೃತ್ವದ ಎಸ್‌ಐಟಿಯ ಒಂದು ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದೆ. ಬಂಧನದ ನಂತರ ಯಾವ ರೀತಿ ವಿಚಾರಣೆ ನಡೆಸಬೇಕೆಂಬ ತನಿಖಾಧಿಕಾರಿ ತಯಾರಿ ನಡೆಸಿದ್ದಾರೆ.
ಈಗಾಗಲೇ ಹಲವು ಬಾರಿ ಟಿಕೇಟ್ ಬುಕ್ ಮಾಡಿ ಪ್ರಜ್ವಲ್ ಅವರು ಕೊನೆ ಕ್ಷಣದಲ್ಲಿ ಕ್ಯಾನ್ಸಲ್ ಮಾಡಿದ್ದರು. ಪ್ರಜ್ವಲ್ ಅವರು ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಎಸ್‌ಐಟಿ ಅಧಿಕಾರಿ ವಿಮಾನ ನಿಲ್ದಾಣದಲ್ಲಿ ಕಾಯ್ದು ಕಾಯ್ದು ಸುಸ್ತಾಗಿದ್ದರು.
ಕಳೆದ ಮೂರು ದಿನಗಳ ಹಿಂದೆ ವಿಡಿಯೋ ಹರಿ ಬಿಟ್ಟ ಪ್ರಜ್ವಲ್ ಅವರು ಮೇ 31ರಂದು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಜರ್ಮನಿಯ ಮೂನಿಚ್ ಯಿಂದ ಬೆಂಗಳೂರಿಗೆ ಪ್ರಜ್ವಲ್ ಹೆಸರಿನಲ್ಲಿ ಟಿಕೇಟ್ ಬುಕ್ ಆಗಿದೆ. ಇಂದು ಮಧ್ಯರಾತ್ರಿ ಅವರು ಆಗಮಿಸುವ ನಿರೀಕ್ಷೆ ಇದೆ.