Sunday, October 6, 2024
Homeರಾಜ್ಯಜೂ.2ರಿಂದ ರಾಜ್ಯದಲ್ಲಿ ವ್ಯಾಪಕ ಮುಂಗಾರು ಮಳೆ ಸಾಧ್ಯತೆ

ಜೂ.2ರಿಂದ ರಾಜ್ಯದಲ್ಲಿ ವ್ಯಾಪಕ ಮುಂಗಾರು ಮಳೆ ಸಾಧ್ಯತೆ

ಬೆಂಗಳೂರು, ಮೇ 31- ಪ್ರಸಕ್ತ ಸಾಲಿನ ನೈರುತ್ಯ ಮುಂಗಾರು ಜೂನ್‌ 2ರಂದು ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆಗಳಿವೆ.ಮುಂಗಾರು ನಿನ್ನೆ ಕೇರಳ ಪ್ರವೇಶ ಮಾಡಿರುವುದನ್ನು ಭಾರತೀಯ ಹವಾಮಾನ ಇಲಾಖೆ ದೃಢಪಡಿಸಿದೆ. ಎರಡು ದಿನ ಮುಂಚೆಯೇ ಕೇರಳ ಪ್ರವೇಶಿಸಿರುವುದಲ್ಲದೆ, ಈಶಾನ್ಯ ರಾಜ್ಯಗಳಲ್ಲೂ ಏಕಕಾಲಕ್ಕೆ ಮುಂಗಾರು ಆರಂಭಗೊಂಡಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಮುಂಗಾರು ಮಳೆ ರಾಜ್ಯ ಪ್ರವೇಶ ಮಾಡಲಿದೆ.

ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೊಂದು ಸುತ್ತು ಮಳೆ ಆರಂಭಗೊಳ್ಳಲಿದೆ. ಮುಂಗಾರು ದುರ್ಬಲವಾಗಿರುವುದರಿಂದ ಭಾರೀ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ನಾಳೆಯಿಂದ ದಕ್ಷಿಣ ಕರ್ನಾಟಕದ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.

ಭಾನುವಾರದಿಂದ ಮುಂಗಾರು ಆರಂಭಗೊಳ್ಳುವುದರಿಂದ ಉತ್ತರ ಕರ್ನಾಟಕಕ್ಕೂ ಮಳೆ ವ್ಯಾಪಿಸಲಿದೆ. ಸಂಜೆ ಹಾಗೂ ರಾತ್ರಿ ವೇಳೆ ಮಿಂಚು, ಗುಡುಗು ಹಾಗೂ ಬಲವಾದ ಗಾಳಿ ಸಹಿತ ರಾಜ್ಯದೆಲ್ಲೆಡೆ ವ್ಯಾಪಕ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಪೂರ್ವ ಮುಂಗಾರಿನ ಮಾರ್ಚ್‌ ಮತ್ತು ಏಪ್ರಿಲ್‌ ಮಳೆ ಕೊರತೆಯನ್ನು ನೀಗಿಸಿದಂತಾಗಿದೆ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಮೇ ಒಂದರಿಂದ 30ರ ವರೆಗೆ ವಾಡಿಕೆ ಮಳೆ ಪ್ರಮಾಣ 70 ಮಿ.ಮೀ. ಆಗಿದೆ. ಈ ಅವಧಿಯಲ್ಲಿ 129 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.83ರಷ್ಟು ಅಧಿಕವಾಗಿದೆ. ಮಾರ್ಚ್‌ನಿಂದ ಮೇ ವರೆಗೆ 112 ಮಿ.ಮೀ. ವಾಡಿಕೆ ಮಳೆ ಪ್ರಮಾಣವಾಗಿದ್ದು, 151 ಮಿ.ಮೀ.ನಷ್ಟು ಮಳೆಯಾಗಿದೆ.

ಈಗಾಗಲೇ ಮುಂಗಾರು ಆರಂಭವಾಗಿರುವುದರಿಂದ ಒಂದು ವಾರ ಕಾಲ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಮಳೆ ವ್ಯಾಪಕ ಪ್ರಮಾಣದಲ್ಲಿ ಆಗಲಿದೆ. ಆ ನಂತರ ಬಿಡುವು ಕೊಡಲಿದೆ. ಈ ಬಾರಿಯ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗುವ ಮುನ್ಸೂಚನೆಗಳಿದ್ದು, ಉತ್ತಮ ಮಳೆಯಾಗುವ ಆಶಾಭಾವನೆ ಇದೆ. ಹೀಗಾಗಿ ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಭೂಮಿ ಹದ ಮಾಡುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.

RELATED ARTICLES

Latest News