ಬೆಂಗಳೂರು, ಮೇ 31- ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ತೀವ್ರ ಕುತೂಹಲದಿಂದ ವಿದ್ಯಾರ್ಥಿಗಳು ಕಾಯುತ್ತಿರುವ ಕೆ-ಸಿಇಟಿ ಪರೀಕ್ಷಾ ಫಲಿತಾಂಶ ಶೀಘ್ರದಲ್ಲೆ ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿರುವ 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ) ಫಲಿತಾಂಶ ಮುಂದಿನ ವಾರ ಪ್ರಕಟವಾಗುವ ಸಾಧ್ಯತೆಗಳಿವೆ.
ಉನ್ನತ ಮೂಲಗಳ ಮಾಹಿತಿ ಪ್ರಕಾರ ಜೂನ್ ಮೊದಲ ವಾರದಲ್ಲಿ ಕೆ-ಸಿಇಟಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶ ಪ್ರಕಟಕ್ಕೆ ಪೂರಕವಾದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಯಾವಾಗ ಬೇಕಾದರೂ ಕೆ-ಸಿಇಟಿ ಫಲಿತಾಂಶ ಪ್ರಕಟಗೊಳ್ಳಬಹುದಾಗಿದೆ.
ಏಪ್ರಿಲ್ 18 ಮತ್ತು 19 ರಂದು ರಾಜ್ಯದಲ್ಲಿ ಕೆ-ಸಿಇಟಿ ಪರೀಕ್ಷೆ ನಡೆದಿತ್ತು. ಪಠ್ಯದಲ್ಲಿ ಇಲ್ಲದ ಪ್ರಶ್ನೆಗಳು ಸಿಇಟಿ ಪರೀಕ್ಷೆಯಲ್ಲಿ ನೀಡಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂತಹ ಪ್ರಶ್ನೆಗಳನ್ನು ಹೊರತು ಪಡಿಸಿ ಉಳಿದ ಪ್ರಶ್ನೆಗಳ ಉತ್ತರವನ್ನು ಮೌಲ್ಯಮಾಪನ ಮಾಡುವುದಾಗಿ ಪ್ರಾಧಿಕಾರ ಘೋಷಿಸಿದಲ್ಲದೆ, ಸರಿಯಾದ ಕೀ ಉತ್ತರಗಳನ್ನು ಪ್ರಕಟಿಸಿತ್ತು.
ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ, ಸಿಬಿಎಸ್‌ಇ, ಐಸಿಎಸ್‌ಇ ಮೊದಲಾದ ಮಂಡಳಿ ಪರೀಕ್ಷೆ ಅಂಕಗಳನ್ನು ದಾಖಲಿಸಲು ಅವಕಾಶ ನೀಡಿತ್ತು. ಈಗ ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತ ತಲುಪಿದ್ದು, ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.