ಕನಕಪುರ, ಮೇ 31- ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ವಾಸ್ತವಾಂಶಗಳ ಪರಿಶೀಲನೆ ನಡೆಯುತ್ತಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ವಕ್ಷೇತ್ರದಲ್ಲಿ ವಿಧಾನಪರಿಷತ್ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮುಖಂಡರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಾವು ನಿನ್ನೆ ಸಭೆ ನಡೆಸಿದ್ದೇವೆ. ವಾಸ್ತವಾಂಶ ಏನು ಎಂದು ವಿಚಾರಣೆ ನಡೆಯುತ್ತಿದ್ದು, ವರದಿ ಬಂದ ಬಳಿಕ ಪರಿಶೀಲಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯ ನಾಯಕರು ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರ ಬಳಿಕ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಗಡುವು ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಈಗಿನಿಂದಲೇ ಪ್ರತಿಭಟನೆ ಮಾಡಲಿ. 6 ರವರೆಗೂ ಕಾಯುವುದೇಕೆ? ಯಾವುದಕ್ಕೆ ಬಾಯಿ ಬಿಡಬೇಕೋ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಹಿಂದಿನ ಸರ್ಕಾರದಲ್ಲಿ ಎಸ್‌ಪಿ, ಇನ್‌್ಸಪೆಕ್ಟರ್ ಸೇರಿದಂತೆ ಪೊಲೀಸರಿಗೆ ಹಬ್ಬದ ದಿನ. ಬಿಜಾಪುರ ಮತ್ತು ಉಡುಪಿಯಲ್ಲಿ ಬಿಜೆಪಿಯ ಬಟ್ಟೆ ಹಾಕಿಸಿದ್ದನ್ನು ವಿರೋಧಪಕ್ಷದ ನಾಯಕ ಆರ್.ಅಶೋಕ್ ಮರೆತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ತಿರುಗೇಟು ನೀಡಿದರು.
ತಮ ವಿರುದ್ಧ ಕೇರಳದಲ್ಲಿ ಯಾಗ ನಡೆಸಿರುವ ಬಗ್ಗೆ ಸದ್ಯಕ್ಕೆ ಉತ್ತರಿಸುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಸರ್ಕಾರಕ್ಕೆ ಆಶೀರ್ವದಿಸಲು, ರಕ್ಷಣೆ ನೀಡಲು ಜನ ಇದ್ದಾರೆ. ನಾನು ನಂಬಿರುವ ಶಕ್ತಿ ಮತ್ತು ದೇವರು ನಮನ್ನು ಕಾಪಾಡುತ್ತದೆ ಎಂದರು.ಅಜ್ಜಯ್ಯ ಅವರ ಸನ್ನಿಧಾನಕ್ಕೆ ಭೇಟಿ ನೀಡಿ, ದರ್ಶನ ಪಡೆಯುತ್ತೀರಾ ಎಂಬ ಪ್ರಶ್ನೆಗೆ ತಮ ಮೊಬೈಲ್‌ನ ಹಿಂಬದಿಯಲ್ಲಿ ಅಜ್ಜಯ್ಯ ಅವರ ಭಾವಚಿತ್ರವನ್ನು ಲಗತ್ತಿಸಿರುವುದನ್ನು ಡಿ.ಕೆ.ಶಿವಕುಮಾರ್ ಪ್ರದರ್ಶಿಸಿದರು.
ಪ್ರಜ್ವಲ್ ರೇವಣ್ಣ ಅವರ ಬಂಧನದ ಬಗ್ಗೆ ಎಸ್‌ಐಟಿಯವರು ಗಮನಿಸುತ್ತಾರೆ. ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರಶ್ನೆಯನ್ನು ತಳ್ಳಿಹಾಕಿದರು.ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆಗೆ ಹೈಕಮಾಂಡ್‌ಗೆ ಪಟ್ಟಿ ನೀಡಿ ಬಂದಿದ್ದೇವೆ. ಉಳಿದ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಾರೆ. ಯಾರ ಹೆಸರನ್ನು ಕೊಟ್ಟಿದ್ದೇವೆ ಎಂದು ಸದ್ಯಕ್ಕೆ ಹೇಳಲಾಗುವುದಿಲ್ಲ ಎಂದು ತಿಳಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್‌ನ ಅಭ್ಯರ್ಥಿ ರಾಮೋಜಿ ಗೌಡರ ಪರವಾಗಿ ತಮ ಕ್ಷೇತ್ರದಲ್ಲಿ ಮುಖಂಡರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ನನ್ನ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.