ಹಾಸನ, ಡಿ.30-ನಗರದಲ್ಲಿ ಜ.24ರಂದು ನಡೆಯುವ ಜೆಡಿಎಸ್ ಬೃಹತ್ ಸಮಾವೇಶಕ್ಕೆ ಕನಿಷ್ಠ 2 ಲಕ್ಷ ಜನ ಸೇರಬೇಕು. ಕಾಂಗ್ರೆಸ್ ಮಾಡಿದ ಸಮಾವೇಶಕ್ಕಿಂತ ದೊಡ್ಡ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನವಾಗಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಿಂದ ಹಾಸನದಲ್ಲಿ ಈಗಾಗಲೇ ಎರಡು ಸಮಾವೇಶ ಜೊತೆಗೆ ಕಾಂಗ್ರೆಸ್ ಮುಖಂಡರೆಲ್ಲಾ ವೇದಿಕೆಯಲ್ಲಿ ನರ್ತನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಭದ್ರಕೋಟೆಯಲ್ಲಿ ನಮ ವರ್ಚಸ್ಸನ್ನು ಕಡಿಮೆ ಮಾಡಬಹುದು ಎಂಬ ಭ್ರಮೆ ಅವರದು. ಆದರೆ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಜನರ ಆಶೀರ್ವಾದದಿಂದ ಸದೃಢವಾಗಿದ್ದು, ಜ.24ರ ಸಮಾವೇಶದಲ್ಲಿ ಪಕ್ಷದ ಶಕ್ತಿ ಎಷ್ಟಿದೆ ಎಂದು ಗೊತ್ತಾಗಲಿದೆ ಎಂದರು.ತಮ ಜೀವನದ ಕೊನೆಯ ಹಂತದಲ್ಲಿದ್ದರೂ ಪಕ್ಷಕ್ಕಾಗಿ ಶ್ರಮಿಸುತ್ತಿರುವುದಾಗಿ ಭಾವನಾತಕವಾಗಿ ನುಡಿದ ಅವರು ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷವಾಗಿದ್ದು ಜನರ ಶಕ್ತಿಯಿಂದಲೇ ಬೆಳೆದು ಬಂದ ಪಕ್ಷವಾಗಿದೆ. ಜೆಡಿಎಸ್ ರಾಷ್ಟ್ರಮಟ್ಟದಲ್ಲಿ ಇಲ್ಲವೆಂದು ಹೇಳುವವರ ವಿರುದ್ಧ ನಾನು ಮಾತನಾಡುವುದಿಲ್ಲ. ಜೆಡಿಎಸ್ ಈಗಲೂ ಸದೃಢವಾಗಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಗುರುತಿಸುವಂತೆ ಉಳಿಸಿ ಬೆಳೆಸಿರುವುದಕ್ಕೆ ಕಾರ್ಯಕರ್ತರು ಹಾಗೂ ಜನರೇ ಕಾರಣ. ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.
ಶಾಸಕ ಹೆಚ್.ಡಿ. ರೇವಣ್ಣ ಮಾತನಾಡಿ, ದ್ವೇಷ ರಾಜಕೀಯ ಮಾಡುವುದು ಕಾಂಗ್ರೆಸ್ ಕೆಲಸವಾಗಿದೆ. ಹಾಸನ ನಗರದಲ್ಲಿ ರೈಲ್ವೆ ಮೇಲ್ಸೇತುವೆ, ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ರಾಜ್ಯ ಸರ್ಕಾರದಿಂದ ವಿಳಂಬವಾಗಿವೆ ಎಂದು ಆರೋಪಿಸಿದರು.
ಶಾಸಕ ಎ. ಮಂಜು ಮಾತನಾಡಿ, ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು, ಇದಕ್ಕೆ ಸ್ಪಷ್ಟ ನಿರ್ಧಾರ ಅಗತ್ಯವಿದೆ. ಮೈತ್ರಿ ಮುಂದುವರಿಸಬೇಕಾದರೆ ಎಲ್ಲಾ ಚುನಾವಣೆಯಲ್ಲೂ ಅದನ್ನು ಜಾರಿಗೊಳಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2,800ಕ್ಕೂ ಹೆಚ್ಚು ರೈತರು ಆತಹತ್ಯೆ ಮಾಡಿಕೊಂಡಿದ್ದು, ಶೇ.50ರಷ್ಟು ಭ್ರಷ್ಟಾಚಾರ ಇದೆ ಎಂಬ ಆರೋಪವನ್ನು ಉಪಲೋಕಾಯುಕ್ತರೇ ಮಾಡಿದ್ದಾರೆ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ದೇವೇಗೌಡರ ನೇತೃತ್ವದಲ್ಲಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯನ್ನು ಎದುರಿಸಲಿದ್ದು ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ದೇವೇಗೌಡರ ಮಾರ್ಗದರ್ಶನದಲ್ಲಿ ಜನವರಿ 24 ರಂದು ಹಾಸನದಲ್ಲಿ ನಡೆಯುವ ಸಮಾವೇಶವನ್ನು ಯಶಸ್ವಿಗೊಳಿಸಲು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ , ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್ ಲಿಂಗೇಶ್, ಮಾಜಿ ಸಚಿವರಾದ ಸಾ.ರಾ.ಮಹೇಶ್, ಮಾಜಿ ಶಾಸಕ ಪರಮೇಶ್ವರಪ್ಪ, ಎನ್. ಆರ್.ಸಂತೋಷ್, ಪಕ್ಷದ ಮುಖಂಡರಾದ ಎಸ್.ದ್ಯಾವೇಗೌಡ, ಆಲೂರು ತಾಲ್ಲೂಕು ಘಟಕದ ಅದ್ಯಕ್ಷ ಮಂಜೇಗೌಡ, ಒಕ್ಕಲಿಗರ ಸಂಘದ ರಾಜ್ಯ ಘಟಕದ ನಿರ್ದೇಶಕ ರಘುಗೌಡ, ಮಾಜಿ ಮೇಯರ್ ಗಿರೀಶ್ ಚನ್ನವೀರಪ್ಪ , ಬಾಣಾವರ ಅಶೋಕ್, ಚಂಚಲಾ ಕುಮಾರಸ್ವಾಮಿ, ತೋ.ಚ. ಅನಂತಸುಬ್ಬರಾಯ , ಹೊನ್ನವಳ್ಳಿ ಸತೀಶ್ ಸೇರಿದಂತೆ ನೂರಾರು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
