Friday, November 22, 2024
Homeರಾಜ್ಯಪದವೀಧರ, ಶಿಕ್ಷಕರ ಕ್ಷೇತ್ರಗಳ ಪರಿಷತ್‌ ಚುನಾವಣೆಗೆ ಸೋಮವಾರ ಮತದಾನ

ಪದವೀಧರ, ಶಿಕ್ಷಕರ ಕ್ಷೇತ್ರಗಳ ಪರಿಷತ್‌ ಚುನಾವಣೆಗೆ ಸೋಮವಾರ ಮತದಾನ

ಬೆಂಗಳೂರು, ಜೂ.1- ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ವಿಧಾನ ಪರಿಷತ್ತಿನ ಮೂರು ಪದವೀಧರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸೋಮವಾರ ಮತದಾನ ನಡೆಯಲಿದೆ.

ಕರ್ನಾಟಕ ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ಕರ್ನಾಟಕ ನೈರುತ್ಯ ಪದವೀಧರ ಹಾಗೂ ಕರ್ನಾಟಕ ಆಗ್ನೇಯ ಶಿಕ್ಷಕರ, ನೈರುತ್ಯ ಶಿಕ್ಷಕರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳಲ್ಲಿ ಸೋಮವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಈ ಆರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಂತೆ ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ವಿಧಾನ ಪರಿಷತ್‌ ಚುನಾವಣೆಯಲ್ಲೂ ಮಾಡಿಕೊಂಡಿವೆ. ಕಾಂಗ್ರೆಸ್‌‍ ಆರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ ನಾಲ್ಕು ಹಾಗೂ ಜೆಡಿಎಸ್‌‍ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ.

ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 121860, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 156623, ನೈರುತ್ಯ ಪದವೀಧರ ಕ್ಷೇತ್ರದಲ್ಲಿ 85090 ಪದವೀಧರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 25309, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 23402, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 21549 ಶಿಕ್ಷಕರು ಮತದಾರರಾಗಿದ್ದಾರೆ.

ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 47, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 79, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 44 ಸೇರಿದಂತೆ ಒಟ್ಟು 170 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 159, ಈಶಾನ್ಯ ಪದವೀಧರ ಕ್ಷೇತ್ರದಲ್ಲಿ 194, ನೈರುತ್ಯ ಪದವೀಧರ ಕ್ಷೇತ್ರದಲ್ಲಿ 108 ಸೇರಿದಂತೆ 461 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ನೋಂದಾಯಿತ ಪದವೀಧರ ಹಾಗೂ ಶಿಕ್ಷಕ ಮತದಾರರು ಮತದಾರರ ಗುರುತಿನ ಚೀಟಿ,ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಸೇರಿದಂತೆ ನಿಗದಿಪಡಿಸಿರುವ ಗುರುತಿನ ಚೀಟಿಗಳನ್ನು ಹಾಜರು ಪಡಿಸಿ ಮತದಾನ ಮಾಡಬಹುದಾಗಿದೆ. ಜೂನ್‌ 6ರಂದು ಮತ ಎಣಿಕೆ ಆಯಾ ಕ್ಷೇತ್ರಗಳಲ್ಲಿ ನಡೆಯಲಿದ್ದು, ಜೂನ್‌ 12ರ ವೇಳೆಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

RELATED ARTICLES

Latest News