Sunday, September 8, 2024
Homeರಾಜ್ಯಬಿಜೆಪಿ ವಿರುದ್ಧ ಅಪಪ್ರಚಾರ ಜಾಹೀರಾತು ಆರೋಪ ಪ್ರಕರಣ : ಸಿಎಂ, ಡಿಸಿಎಂಗೆ ಜಾಮೀನು

ಬಿಜೆಪಿ ವಿರುದ್ಧ ಅಪಪ್ರಚಾರ ಜಾಹೀರಾತು ಆರೋಪ ಪ್ರಕರಣ : ಸಿಎಂ, ಡಿಸಿಎಂಗೆ ಜಾಮೀನು

ಬೆಂಗಳೂರು,ಜೂ.1– ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಜಾಹೀರಾತು ನೀಡಿ ಅಪಪ್ರಚಾರ ಮಾಡಿದೆ ಎಂಬ ಆರೋಪ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ನ್ಯಾಯಾಲಯದ ಎದುರು ವಿಚಾರಣೆಗೆ ಹಾಜರಾಗಿ ಜಾಮೀನು ಕೋರಿ ಸಲ್ಲಿಸಿದ ಮನವಿ ಪುರಸ್ಕರಿಸಿದ ನ್ಯಾಯಾಧೀಶರಾದ ಕೆ.ಶಿವಕುಮಾರ್‌ರವರು ಜಾಮೀನು ಮಂಜೂರು ಮಾಡಿದರು.

ರಾಹುಲ್‌ ಗೈರು :
ಪ್ರಕರಣದಲ್ಲಿ ಮತ್ತೊಬ್ಬ ಪ್ರತಿವಾದಿಯಾದ ರಾಹುಲ್‌ಗಾಂಧಿಯವರ ಹಾಜರಾತಿಗೆ ವಿನಾಯಿತಿ ನೀಡಬೇಕೆಂದು ಅವರ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಪರ ವಕೀಲರಾದ ವಿನೋದ್‌ಕುಮಾರ್‌ರವರು ಚುನಾವಣಾ ನೆಪ ಹೇಳಿ ಗೈರುಹಾಜರಾಗುವಂತಿಲ್ಲ, ಇಂದು ಹಾಜರಾಗುವುದಾಗಿ ಹೇಳಿದ್ದರು, ಹಾಜರಾಗುವುದು ಅವರ ಕರ್ತವ್ಯ, ಮೊದಲ ಬಾರಿ ಗೈರಾದಾಗ ವಿನಾಯಿತಿ ನೀಡಿದಿರಿ, ಈಗ ಮೂರನೇ ಬಾರಿ ಗೈರಾಗಿದ್ದಾರೆ, ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು, ವಿಚಾರಣೆಗೆ ಹಾಜರಾಗುವಂತೆ ವಾರಂಟ್‌ ಹೊರಡಿಸಬೇಕೆಂದು ಮನವಿ ಮಾಡಿದರು.

ಇದು ದುರುದ್ದೇಶಪೂರ್ವಕ ಗೈರುಹಾಜರಿಯಲ್ಲ. ಚುನಾವಣೆ ನಡೆಯುತ್ತಿದೆ. ಇಂಡಿಯಾ ಒಕ್ಕೂಟದ ಸಭೆ ಇದೆ. ಹಾಗಾಗಿ ಹಾಜರಾಗಲು ಸಾಧ್ಯವಾಗಿಲ್ಲ. ಹಾಜರಾತಿಗೆ ವಿನಾಯಿತಿ ನೀಡಬೇಕೆಂದು ರಾಹುಲ್‌ ಪರ ವಕೀಲರಾದ ಎಸ್‌‍.ಎ.ಅಹಮದ್‌ ಮನವಿ ಮಾಡಿದರು.
ಜೂ.7 ರಂದು ರಾಹುಲ್‌ಗಾಂಧಿಯವರು ವಿಚಾರಣೆಗೆ ಹಾಜರಾಗಲಿದ್ದಾರೆ. ಅವಕಾಶ ನೀಡಬೇಕೆಂದು ಮನವಿ ಮಾಡಿದರು. ರಾಹುಲ್‌ಗಾಂಧಿಯವರ ಹಾಜರಾತಿಗೆ ವಿನಾಯಿತಿ ನೀಡಬೇಕೋ ಅಥವಾ ವಾರಂಟ್‌ ಹೊರಡಿಸಬೇಕೋ ಎಂಬ ಆದೇಶವನ್ನು ನ್ಯಾಯಾಧೀಶರು ಮಧ್ಯಾಹ್ನಕ್ಕೆ ಕಾಯ್ದಿರಿಸಿದರು.

ಪ್ರಕರಣದ ಹಿನ್ನೆಲೆ :
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧದ ಭ್ರಷ್ಟಾಚಾರವನ್ನು ಪ್ರಧಾನ ಅಸ್ತ್ರವನ್ನಾಗಿಸಿದ್ದ ಕಾಂಗ್ರೆಸ್‌‍ 2023 ರ ಮೇ 5 ರಂದು ಭ್ರಷ್ಟಾಚಾರ ದರ ಪಟ್ಟಿ ಎಂಬ ಹೆಸರಿನಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿ ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ಜಾಹೀರಾತು ಪ್ರಕಟಿಸಿತ್ತು.

ಅಲ್ಲದೆ, ಕೋವಿಡ್‌ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಶೇ. 75-80 ಕಮಿಷನ್‌ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್‌‍ ಆರೋಪಿಸಿತ್ತು. ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಪರ್ಸೆಂಟ್‌ ಕಮಿಷನ್‌ನ (ಬಿಜೆಪಿ ಸರ್ಕಾರವು 1.5 ಲಕ್ಷ ಕೋಟಿ ರೂ.ಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ) ಎಂದು ಕಾಂಗ್ರೆಸ್‌‍ ಆರೋಪ ಮಾಡಿತ್ತು.

ಡಬ್ಬಲ್‌ ಎಂಜಿನ್‌ ಸರ್ಕಾರಕ್ಕೆ ಬದಲಾಗಿ ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಿ ಕಳೆದ ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ. ಕೊನೆಯಲ್ಲಿ ಕಾಂಗ್ರೆಸ್‌‍ಗೆ ಮತ ನೀಡಿ ಎಂದು ಕೇಳಿದ್ದಾರೆ. ಸುಳ್ಳು ಜಾಹೀರಾತು ನೀಡಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಾಹುಲ್‌ಗಾಂಧಿಯವರು ನೇರ ಕಾರಣರಾಗಿದ್ದಾರೆ ಎಂದು ಬಿಜೆಪಿ ದೂರು ನೀಡಿತ್ತು.

ರಾಹುಲ್‌ಗಾಂಧಿಯವರು ತಮ ಟ್ವಿಟರ್‌ ಖಾತೆಯಲ್ಲಿ ಈ ಜಾಹೀರಾತನ್ನು ಹಂಚಿಕೊಂಡು ಬಿಜೆಪಿಗೆ ಮಾನಹರಣ ಮಾಡುವ ಪ್ರಯತ್ನ ಮಾಡಿದ್ದಾರೆ, ಹೀಗಾಗಿ ಕಾಂಗ್ರೆಸ್‌‍ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ರಾಹುಲ್‌ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿಯು ಖಾಸಗಿ ದೂರು ದಾಖಲಿಸಿತ್ತು.

ಇದನ್ನು ಪರಿಗಣಿಸಿದ ವಿಶೇಷ ನ್ಯಾಯಾಲಯ ಫೆ.23 ರಂದು ಮಾನಹಾನಿ ದಾವೆ ದಾಖಲಿಸಲು ಆದೇಶಿಸಿ ಆರೋಪಿಗಳಿಗೆ ಸಮನ್‌್ಸ ಜಾರಿ ಮಾಡಿತ್ತು. ಸಮನ್‌್ಸ ಅನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರವರಿಗೆ ತಲುಪಿಸದ ಹಿನ್ನೆಲೆಯಲ್ಲಿ ಮರು ಜಾರಿ ಮಾಡಲಾಗಿತ್ತು.

RELATED ARTICLES

Latest News