Tuesday, December 30, 2025
Homeರಾಜಕೀಯಅತಿಕ್ರಮಣಕಾರರಿಗೆ ರಾಜ್ಯ ಸರ್ಕಾರದಿಂದ ಶರವೇಗದ ತುಷ್ಟೀಕರಣ : ಪ್ರಲ್ಹಾದ ಜೋಶಿ ಕಿಡಿ

ಅತಿಕ್ರಮಣಕಾರರಿಗೆ ರಾಜ್ಯ ಸರ್ಕಾರದಿಂದ ಶರವೇಗದ ತುಷ್ಟೀಕರಣ : ಪ್ರಲ್ಹಾದ ಜೋಶಿ ಕಿಡಿ

State government's quick appeasement of encroachers: Pralhad Joshi

ನವದೆಹಲಿ, ಡಿ.30- ಕರ್ನಾಟಕದಲ್ಲಿ ಕಾಂಗ್ರೆಸ್‌‍ ಸರ್ಕಾರ ಬೆಂಗಳೂರಿನ ಕೋಗಿಲು ಅತಿಕ್ರಮಣಕಾರರಿಗೆ ಕೇವಲ ಎರಡೇ ದಿನದಲ್ಲಿ ಪರಿಹಾರ ವ್ಯವಸ್ಥೆಗೆ ಮುಂದಾಗಿರುವುದು ತುಷ್ಟೀಕರಣದ ಶರವೇಗವನ್ನು ತೋರ್ಪಡಿಸಿದೆ ಎಂದು ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ರೈತರು, ಬೆಳೆಹಾನಿ ಸಂತ್ರಸ್ತರು ಮತ್ತು ಇತರ ನಿರಾಶ್ರಿತರು ಪರ್ಯಾಯ ವ್ಯವಸ್ಥೆ ಹಾಗೂ ಪರಿಹಾರಕ್ಕಾಗಿ ವರ್ಷಾನುಗಟ್ಟಲೆ ಕಾಯುತ್ತಿದ್ದಾರೆ. ಗೃಹಲಕ್ಷ್ಮಿ ಫಲಾನುಭವಿಗಳು ಗ್ಯಾರಂಟಿ ನಿಧಿಗಾಗಿ ಕಾಯುತ್ತಿದ್ದಾರೆ. ಆದರೆ, ಸರ್ಕಾರ ಕೋಗಿಲು ಅತಿಕ್ರಮಣಕಾರರಿಗೆ ಮಾತ್ರ ಕ್ಷಣಾರ್ಧದಲ್ಲಿ ಪರಿಹಾರ, ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ. ಇದು ಕಾಂಗ್ರೆಸ್‌‍ ಸರ್ಕಾರದ ಮಿತಿಮೀರಿದ ಧರ್ಮ ಓಲೈಕೆ ಆಡಳಿತವನ್ನು ಪ್ರದರ್ಶಿಸುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.

ಅತಿಕ್ರಮಣಕಾರರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದಾಗಿ ಸಹ ಘೋಷಿಸಿದ್ದು, ಪ್ರತಿ ಮನೆಗೆ 8 ರಿಂದ 11 ಲಕ್ಷ ರೂ. ಮತ್ತು ಸಬ್ಸಿಡಿ ನೀಡುವುದಾಗಿ ಹೇಳಿದ್ದು, ಇದೊಂದು ಬಾರಿ ಪರಿಹಾರ ಕಲ್ಪಿಸಲಾಗುತ್ತದೆ ಎಂದಿರುವುದು ವಿಪರ್ಯಾಸ. ಸರ್ಕಾರದ್ದು ಅದ್ಯಾವ ರೀತಿಯ ಪರಿಹಾರ ಕ್ರಮ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರ ಕೇವಲ ಒಂದು ಧರ್ಮದ ಓಲೈಕೆಯಲ್ಲೇ ಮುಳುಗಿದೆ. ತುಷ್ಟೀಕರಣಕ್ಕಾಗಿ ಶರವೇಗದಲ್ಲಿ ಪರಿಹಾರ ಕ್ರಮ ಕೈಗೊಂಡಿದೆ. ಅಲ್ಲದೇ, ಔಪಚಾರಿಕ ಪರಿಹಾರ ನೀಡಲು ಮುಂದಾಗಿದ್ದು, ಅತಿ ಬೇಸರದ ಸಂಗತಿ ಎಂದು ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬರ, ಪ್ರವಾಹದಂತಹ ಪ್ರಾಕೃತಿಕ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಪಡೆಯಲು ರಾಜ್ಯದ ಸಂತ್ರಸ್ತರು ವರ್ಷಗಳಿಂದ ಕಾಯುತ್ತಿದ್ದರು. ಆದರೆ, ರಾಜ್ಯ ಸರ್ಕಾರ ಕೋಗಿಲು ಅತಿಕ್ರಮಣಕಾರರಿಗೆ ಕೇವಲ ಎರಡೇ ಎರಡು ದಿನಗಳಲ್ಲಿ ಪರಿಹಾರ ಒದಗಿಸಿ ತನ್ನ ಧರ್ಮಾಧರಿತ ಆಡಳಿತವನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ ಎಂದು ಅವರು ಆರೋಸಿದ್ದಾರೆ.
ಪಕ್ಕದ ರಾಜ್ಯದ ಕಾಂಗ್ರೆಸ್‌‍ ನಾಯಕರೊಬ್ಬರು ಕರೆ ಮಾಡಿ ತಕ್ಷಣ ಪರಿಹಾರ ಕ್ರಮಕ್ಕೆ ನಿರ್ದೇಶಿಸಿದ್ದು, ರಾಜ್ಯ ಸರ್ಕಾರ ಕಾಂಗ್ರೆಸ್‌‍ ಪಕ್ಷದ ನಾಯಕತ್ವದ ಕೈಗೊಂಬೆಯಾಗಿ ವರ್ತಿಸುತ್ತಿದೆ.

ತನ್ನ ಆದ್ಯ ಕರ್ತವ್ಯ ಮತ್ತು ಕಾನೂನಿನ ಪರಿಮಿತಿಯ ಜವಾಬ್ದಾರಿಯನ್ನು ಗಾಳಿಗೆ ತೂರಿ, ತುಷ್ಟೀಕರಣ ರಾಜಕಾರಣದ ಪರಮಾವಧಿಯನ್ನು ಪ್ರದರ್ಶಿಸಿದೆ ಎಂದು ಅವರು ಟೀಕಿಸಿದ್ದಾರೆ.
ಈ ಸರ್ಕಾರದ ಆಡಳಿತದಲ್ಲಿ ರೈತರು, ನಿಜವಾದ ಸಂತ್ರಸ್ತರು, ಗೃಹಲಕ್ಷ್ಮಿ ಫಲಾನುಭವಿಗಳು ಕಾಯಬೇಕಾದ ಪರಿಸ್ಥಿತಿ ಇದೆಯೇ ವಿನಃ ಅಕ್ರಮವಾಗಿ ಅತಿಕ್ರಮಿಸಿದವರು ಕಾಯುವಂತಿಲ್ಲ ಎಂದು ಜೋಶಿ ಚಾಟಿ ಬೀಸಿದ್ದಾರೆ.

RELATED ARTICLES

Latest News