ಮುಂಬೈ, ಜೂನ್ 3 (ಪಿಟಿಐ) – ಕೋಝಿಕ್ಕೋಡ್‌ನಿಂದ ಬಹ್ರೇನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ ಆರೋಪದ ಮೇಲೆ 25 ವರ್ಷದ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಸಿಎಸ್‌ಎಂಐಎ) ವಿಮಾನ ತುರ್ತು ಭೂಸ್ಪರ್ಶ ಮಾಡಿದ ನಂತರ ಆರೋಪಿ ಅಬ್ದುಲ್ ಮುಸಾವಿರ್ ನಡುಕಂಡಿಯನ್ನು ಬಂಧಿಸಲಾಗಿದೆ ಎಂದು ಸಹರ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳ ಮೂಲದ ನಡುಕಂಡಿ ಎಂಬಾತ ಕೋಝಿಕ್ಕೋಡ್‌ನಿಂದ ವಿಮಾನ ಟೇಕಾಫ್ ಆಗುವಾಗ ಎಚ್ಚರಗೊಂಡು ತಕ್ಷಣವೇ ವಿಮಾನದ ಹಿಂಭಾಗಕ್ಕೆ ತೆರಳಿ ಅಲ್ಲಿ ಕ್ಯಾಬಿನ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ವಿಮಾನದ ಬಾಗಿಲು ತೆರೆಯಲು ಯತ್ನಿಸಿದ್ದಾನೆ ಎಂದು ಅವರು ಹೇಳಿದ್ದಾರೆ.
ಸಿಬ್ಬಂದಿಗಳು ಪ್ರಯಾಣಿಕನನ್ನು ತನ್ನ ಸೀಟಿಗೆ ಕರೆತರುವಲ್ಲಿ ಯಶಸ್ವಿಯಾದಾಗ, ಅವನು ಇತರ ಪ್ರಯಾಣಿಕರನ್ನು ಅವಾಚ್ಯವಾಗಿ ನಿಂದಿಸಲು ಮತ್ತು ಹಲ್ಲೆ ಮಾಡಲು ಪ್ರಾರಂಭಿಸಿದನು ನಂತರ ತುರ್ತು ಬಾಗಿಲು ತೆರೆಯುವಂತೆ ಬೆದರಿಕೆ ಹಾಕಿದನು ಎಂದು ಅಧಿಕಾರಿ ಹೇಳಿದರು.
ಭದ್ರತಾ ಬೆದರಿಕೆಗೆ ಹೆದರಿದ ಪೈಲಟ್ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿ ಭದ್ರತಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಮಾನದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.