ನವದೆಹಲಿ,ಜೂ.4- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆಗಳ ಸಮೀಕ್ಷೆಗಳು ಬಹುತೇಕ ಕೈ ಕೊಟ್ಟಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತದೆ ಎಂಬ ಭವಿಷ್ಯ ಹುಸಿಯಾಗಿದೆ.
ಕಳೆದ ಶನಿವಾರ 7ನೇ ಹಂತದ ಮತದಾನ ಮುಗಿದ ಬೆನ್ನಲ್ಲೇ ದೇಶದ ವಿವಿಧ ಖಾಸಗಿ ಸುದ್ದಿ ವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ ಬಹುತೇಕ ಎಲ್ಲ ವಾಹಿನಿಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 350ರಿಂದ 400 ಸ್ಥಾನಗಳನ್ನು ಗೆಲ್ಲಬಹುದೆಂದು ಹೇಳಿದ್ದವು.
ಅದರಲ್ಲೂ ಬಿಜೆಪಿ ಒಂದೇ ಪಕ್ಷ ಕನಿಷ್ಟ 2019ರಲ್ಲಿ ಗೆದ್ದ 303ಕ್ಕಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಕೆಲವು ಸಮೀಕ್ಷೆಗಳು ಬಿಜೆಪಿ 320, 330, 350, 360 ಕ್ಷೇತ್ರಗಳವರೆಗೆ ಗೆದ್ದು ಹತ್ತಿರತ್ತಿರ 400 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಗೊತ್ತಾಗಿತ್ತು.
ಆದರೆ ಪ್ರಕಟಗೊಂಡಿರುವ ಫಲಿತಾಂಶದಲ್ಲಿ ವಾಸ್ತವಕ್ಕೂ, ಮತಗಟ್ಟೆ ಸಮೀಕ್ಷೆಗೂ ಅಜಗಜಾಂತರ ವ್ಯತ್ಯಾಸ ಇರುವುದು ಸ್ಪಷ್ಟವಾಗಿ ಗೋಚರಿಸಿದೆ. ಬಿಜೆಪಿ ಮತಗಟ್ಟೆ ಸಮೀಕ್ಷೆಗಳನ್ನೇ ನಂಬಿಕೊಂಡು ಫಲಿತಾಂಶಕ್ಕೂ ಮುನ್ನವೇ ಅತಿಯಾದ ಆತವಿಶ್ವಾಸದಲ್ಲಿತ್ತು.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಹೆಚ್ಚೆಂದರೆ 160ರಿಂದ 180 ಕ್ಷೇತ್ರಗಳನ್ನು ಗೆಲ್ಲಬಹುದೆಂದು ಅಂದಾಜಿಸಲಾಗಿತ್ತು. ಈಗ ಎಲ್ಲವೂ ಅಯೋಮಯವಾಗಿದ್ದು, ಮತಗಟ್ಟೆ ಸಮೀಕ್ಷೆಗಳನ್ನು ನಂಬಬೇಕೆ ಬೇಡವೇ ಎಂಬ ಜಿಜ್ಞಾಸೆ ಎದುರಾಗಿದೆ.