ಬೆಂಗಳೂರು,ಜೂ.4- ಜಿದ್ದಾಜಿದ್ದಿನ ರಣಕಣ ಎಂದೇ ಪರಿಗಣಿಸಲಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಸಹೋದರರ ಸವಾಲು ಮೆಟ್ಟಿ ನಿಂತು ಗೆಲುವ ಸಾಧಿಸುವಲ್ಲಿ ಹೃದಯವಂತ ಡಾ.ಮಂಜುನಾಥ್ ಯಶಸ್ವಿಯಾಗಿದ್ದಾರೆ.ಒಟ್ಟು ಚಲಾವಣೆಯಾಗಿದ್ದ 1914030 ಮತಗಳಲ್ಲಿ ಡಾ.ಮಂಜುನಾಥ್ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ವೈದ್ಯಕೀಯ ವೃತ್ತಿಯಿಂದ ನಿವೃತ್ತಿ ಪಡೆದ ನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ದೇವೇಗೌಡರ ಕುಟುಂಬ ಹಾಗೂ ಡಿಕೆ ಸಹೋದರರ ನಡುವಿನ ಕಾಳಗ ಎಂದೇ ಬಿಂಬಿತವಾಗಿದ್ದ ಗ್ರಾಮಾಂತರ ಕ್ಷೇತ್ರದಲ್ಲಿ ಎರಡು ಕಡೆಯವರು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದ ಕಾರಣ ಈ ಕ್ಷೇತ್ರ ರಣಕಣವಾಗಿ ಮಾರ್ಪಾಡಾಗಿತ್ತು.
ಮಂಡ್ಯ ಮತ್ತು ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ ತನ್ನ ವರ್ಚಸ್ಸು ವೃದ್ದಿಸುವುದರ ಜೊತೆಗೆ ಮುಖ್ಯಮಂತ್ರಿ ಪಟ್ಟಕ್ಕೆರಲು ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ ಸಹೋದರನ ಗೆಲುವಿಗೆ ಪಣ ತೊಟ್ಟಿದ್ದರು.
ಆದರೆ ಕ್ಷೇತ್ರದಲ್ಲಿ ಸಹೋದರರ ಸವಾಲನ್ನು ಮೆಟ್ಟಿ ನಿಲ್ಲಬೇಕು ಎಂದು ಹಠ ಹಿಡಿದಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವೈದ್ಯರಾಗಿ ನಾಡಿನಲ್ಲಿ ಮನೆ ಮಾತಾಗಿದ್ದ ಮಂಜುನಾಥ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.
ಹೀಗಾಗಿ ಬೆಂಗಳೂರು ಗ್ರಾಮಾಂತರ ಕ್ಷೇತದ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಸೋಲು ಗೆಲುವಿಗಾಗಿ ಕೋಟ್ಯಾಂತರ ರೂ.ಬೆಟ್ಟಿಂಗ್ ಕಟ್ಟಿಕೊಳ್ಳಲಾಗಿತ್ತು. ಇಲ್ಲಿ ಯಾರೇ ಗೆದ್ದರೂ ಬೆರಳೇಣಿಕೆ ಮತಗಳ ಅಂತರ ಎಂದೇ ಎಲ್ಲರೂ ಭಾವಿಸಿದ್ದರೂ ಆದರೆ, ಈ ಎಲ್ಲ ಅಂತೆ-ಕಂತೆಗಳಿಗೆ ಮುಕ್ತಿ ಹಾಡಿರುವ ಇಲ್ಲಿನ ಮತದಾರರು ಮಂಜುನಾಥ್ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ.