Friday, November 22, 2024
Homeರಾಷ್ಟ್ರೀಯ | Nationalಕೇಂದ್ರದಲ್ಲಿ ಸರ್ಕಾರ ರಚನೆಗೆ ಹಾವು-ಏಣಿಯಾಟ : ಕಿಂಗ್ ಮೇಕರ್ ಸ್ಥಾನದಲ್ಲಿ ಜೆಡಿಯು, ಟಿಡಿಪಿ

ಕೇಂದ್ರದಲ್ಲಿ ಸರ್ಕಾರ ರಚನೆಗೆ ಹಾವು-ಏಣಿಯಾಟ : ಕಿಂಗ್ ಮೇಕರ್ ಸ್ಥಾನದಲ್ಲಿ ಜೆಡಿಯು, ಟಿಡಿಪಿ

ನವದೆಹಲಿ,ಜೂ.4- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆದ್ದು 3ನೇ ಬಾರಿ ಅಧಿಕಾರ ಗದ್ದುಗೆ ಹಿಡಿಯುವ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ದೇಶದ ಮತದಾರ ಮರ್ಮಾಘಾತ ನೀಡಿದ್ದು, ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಹಿಡಿಯಲು ಹಾವು-ಏಣಿ ಆಟ ನಡೆದಿದೆ. ಆಂಧ್ರಪ್ರದೇಶದಲ್ಲಿ ಟಿಡಿಪಿ, ಬಿಹಾರದಲ್ಲಿ ಜೆಡಿಯು ಕೇಂದ್ರ ಸರ್ಕಾರ ರಚನೆಯಲ್ಲಿ ಕಿಂಗ್‌ ಮೇಕರ್‌ ಸ್ಥಾನ ಗಳಿಸಿದ್ದು, ಈ ಎರಡೂ ಪಕ್ಷಗಳಿಗೆ ಭಾರೀ ಬೇಡಿಕೆ ಬಂದಿದೆ.

ಟಿಡಿಪಿ ಮತ್ತು ಜೆಡಿಯು ಚುನಾವಣಾ ಮುನ್ನವೇ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಭಾಗವಾಗಿದ್ದಾರೆ. ಆದರೆ ರಾಜಕೀಯದಲ್ಲಿ ಯಾವ ಕ್ಷಣದಲ್ಲಾದರೂ ಅಸಾಧ್ಯವಾದುದು ಸಾಧ್ಯವಾಗುವುದರಿಂದ ಈ ಎರಡು ಪಕ್ಷಗಳ ತೀರ್ಮಾನದ ಮೇಲೆ ಕೇಂದ್ರದಲ್ಲಿ ಯಾವ ಸರ್ಕಾರ ಬರಲಿದೆ ಎಂಬುದು ತೀರ್ಮಾನವಾಗಲಿದೆ.

ಆದರೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ನಾವು ಎನ್‌ಡಿಎ ಮೈತ್ರಿ ಭಾಗವಾಗಿರುವುದರಿಂದ ಬಿಜೆಪಿಗೆ ತಮ ಬೆಂಬಲ ಎಂದು ಘೋಷಿಸಿದ್ದಾರೆ. ಇತ್ತ ಆಂಧ್ರಪ್ರದೇಶದಲ್ಲಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಕೂಡ ಎನ್‌ಡಿಎಗೆ ಬೆಂಬಲ ಸೂಚಿಸಿರುವುದರಿಂದ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚಿಸುವ ಲಕ್ಷಣಗಳು ಗೋಚರಿಸಿವೆ. ಜೊತೆಗೆ ಬಿಹಾರದಲ್ಲಿ ಎಲ್‌ಜೆಪಿಗೂ ಕೂಡ ಮೈತ್ರಿ ಧರ್ಮ ಪಾಲನೆ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ನಿತೀಶ್‌ಕುಮಾರ್‌ ಚಂದ್ರಬಾಬು ನಾಯ್ದುಗೆ ಗಾಳ:
ಎನ್‌ಡಿಎ ಒಕ್ಕೂಟದ ನಾಯಕರು ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಮತ್ತು ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ದು ಅವರನ್ನು ಸಂಪರ್ಕಿಸಿ ಒಕ್ಕೂಟಕ್ಕೆ ಸೆಳೆಯಲು ಯತ್ನ ನಡೆಸಿದ್ದಾರೆ. ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 15ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಲ್ಲಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದೆ.

ಎರಡೂ ಪಕ್ಷಗಳು ಪ್ರಸ್ತುತ ಎನ್‌ಡಿಎನಲ್ಲಿವೆ. ಹೀಗಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ಇಬ್ಬರು ನಾಯಕರ ಕೃಪೆಯಿಂದ ನಡೆಯಬೇಕಿದ್ದು, ನಿತೀಶ್‌ಕುಮಾರ್‌ ಮತ್ತು ಚಂದ್ರಬಾಬು ನಾಯ್ಡು ಕಿಂಗ್‌ಮೇಕರ್‌ ಆಗಲಿದ್ದಾರೆ. ಏಕೆಂದರೆ ಬಿಜೆಪಿ ಮತ್ತು ಕಾಂಗ್ರೆಸ್‌‍ ನಡುವೆ ಯಾವಾಗ ಬೇಕಾದರೂ ಮೈತ್ರಿ ಬದಲಾಯಿಸುವ ಇತಿಹಾಸವನ್ನು ಉಭಯ ನಾಯಕರೂ ಹೊಂದಿದ್ದಾರೆ.

ಚಂದ್ರಬಾಬು ನಾಯ್ಡು ಅವರು 2014 ಮತ್ತು 2019ರ ನಡುವೆ ಎನ್‌ಡಿಎ ಸರ್ಕಾರದ ಭಾಗವಾಗಿದ್ದರು. 2019ರ ಲೋಕಸಭೆ ಚುನಾವಣೆಗೆ ಮೊದಲು ಎನ್‌ಡಿಎ ತೊರೆದಿದ್ದರು. ಕಾಂಗ್ರೆಸ್‌‍ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಸೇರಿದರು. ರಾಷ್ಟ್ರೀಯ ಚುನಾವಣೆಗಳು ಘೋಷಣೆಯಾಗುವ ಕೆಲವೇ ದಿನಗಳ ಮೊದಲು, ಮಾರ್ಚ್‌ 2024ರಲ್ಲಿ ಮತ್ತೆ ಎನ್‌ಡಿಎ ಭಾಗವಾದರು.2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿದ್ದರೆ, ಎನ್‌ಡಿಎ 353 ಸ್ಥಾನಗಳನ್ನು ಪಡೆದಿತ್ತು.

RELATED ARTICLES

Latest News