ಬೆಂಗಳೂರು, ಜೂ.4– ವಿಧಾನಸಭೆ ಸದಸ್ಯರಿಂದ ವಿಧಾನಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳು ಮಾನ್ಯಗೊಂಡಿದ್ದು ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾದ ಐವಾನ್ ಡಿಸೋಜಾ, ಕೆ.ಗೋವಿಂದರಾಜ್, ಜಗದೇವ ಗುತ್ತೇದಾರ್, ಬಲ್ಕೀಸ್ ಬಾನು, ಎನ್.ಎಸ್.ಬೋಸರಾಜು, ಡಾ.ಯತೀಂದ್ರ.ಎಸ್. ಹಾಗೂ ಎ.ವಸಂತಕುಮಾರ್ ಅವರ ನಾಮಪತ್ರಗಳು ಮಾನ್ಯವಾಗಿದ್ದು , ಅವಿರೋಧ ಆಯ್ಕೆಯಾಗಲಿದ್ದಾರೆ.
ಜೆಡಿಎಸ್‌ನ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ಅವರ ನಾಮಪತ್ರವೂ ಮಾನ್ಯವಾಗಿದ್ದು ಅವಿರೋಧ ಆಯ್ಕೆಯಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಸಿ.ಟಿ.ರವಿ, ಮೂಳೆ ಮಾರುತಿರಾವ್ ಹಾಗೂ ರವಿಕುಮಾರ್.ಎನ್ ಅವರ ನಾಮಪತ್ರಗಳು ಪುರಸ್ಕೃತವಾಗಿದ್ದು, ಅವಿರೋಧ ಆಯ್ಕೆಯಾಗಲಿದ್ದಾರೆ.
ಚುನಾವಣಾ ಕಣದಲ್ಲಿ 11 ಅಭ್ಯರ್ಥಿಗಳು ಮಾತ್ರ ಉಳಿದಿದ್ದು,ನಾಮಪತ್ರ ವಾಪಸ್ ಪಡೆಯಲು ಜೂನ್ 6 ಕೊನೆಯ ದಿನವಾಗಿದ್ದು, ಅಂದು ಸಂಜೆ ಎಲ್ಲ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ.