ಬೆಂಗಳೂರು,ಜೂ.5- ಉತ್ತರಖಾಂಡದ ಶಾಸ್ತ್ರತಾಳ ಮಯಳಿಗೆಯಲ್ಲಿ ಪ್ರತಿಕೂಲ ವಾತಾವರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಚಾರಣಿಗರನ್ನು ಕರ್ನಾಟಕ ಸರ್ಕಾರ ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಕರ್ನಾಟಕದ 19 ಚಾರಣಿಗರು ಹಾಗೂ ನಾಲ್ವರು ಮಾರ್ಗದರ್ಶಕರು ಉತ್ತರಖಾಂಡದ ಎತ್ತರದ ಶಾಸ್ತ್ರತಾಳ ಮಯಳಿಗೆ ಎಂಬ ಪ್ರದೇಶಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಪ್ರತಿಕೂಲ ವಾತಾವರಣದಿಂದಾಗಿ ಈ ತಂಡ ಅಪಾಯದಲ್ಲಿದೆ ಎಂಬ ಮಾಹಿತಿ ನಿನ್ನೆ ರಾತ್ರಿ ನಮಗೆ ಬಂದಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾರಣಿಗರ ತಂಡದ ಕೆಲವರು ಕೊಖ್ಲಿ ಶಿಬಿರದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆ. ಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸಲು ನಾವು ಈಗಾಗಲೇ ಉತ್ತರಖಾಂಡ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯೊಂದಿಗೆ ಸಂಪರ್ಕದಲ್ಲಿರುವುದಾಗಿ ಅವರು ಹೇಳಿದ್ದಾರೆ.
ಭಾರತೀಯ ವಾಯುಪಡೆಯ ಹೆಲಿಕಾಫ್ಟರ್ ಚಾರಣಿಗರ ರಕ್ಷಣೆಗಾಗಿ ಇಂದು ಬೆಳಿಗ್ಗೆ ಉತ್ತರ ಕಾಶಿ ತಲುಪಿದೆ. ಅಲ್ಲದೆ, 20 ನಿರ್ವಹಣಾ ಪಡೆ ಭೂಮಾರ್ಗವಾಗಿ ಶಿಬಿರದ ಬಳಿಗೆ ತೆರಳುತ್ತಿದೆ. ಸಂಕಷ್ಟದಲ್ಲಿರುವ ಚಾರಣಿಗರನ್ನು ರಕ್ಷಿಸುವ ಎಲ್ಲಾ ಪ್ರಯತ್ನವನ್ನೂ ಪ್ರಾರಂಭಿಸಿರುವುದಾಗಿ ಅವರು ತಿಳಿಸಿದ್ದಾರೆ.