Wednesday, December 18, 2024
Homeರಾಜಕೀಯ | Politicsರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶದ ಹಿಂದಿರುವ ಜಾತಿ ಮತ ಲೆಕ್ಕಾಚಾರ

ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶದ ಹಿಂದಿರುವ ಜಾತಿ ಮತ ಲೆಕ್ಕಾಚಾರ

ಬೆಂಗಳೂರು, ಜೂ.6- ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ 19 ಸ್ಥಾನ ಗೆದ್ದರೆ, ಕಾಂಗ್ರೆಸ್‌ 9 ಸ್ಥಾನದಲ್ಲಿ ಗೆದ್ದಿದೆ. ಮೈತ್ರಿ ಪಕ್ಷಗಳ ಹಾಗೂ ಕಾಂಗ್ರೆಸ್‌ ಗೆಲುವು ಸೋಲಿನ ಹಿಂದೆ ಜಾತಿ ಮತ ಸಮೀಕರಣದ ಲೆಕ್ಕಾಚಾರ ಇದೆ.

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದ ಕ್ಷೇತ್ರಗಳು ಬಹುವಾಗಿ ಜೆಡಿಎಸ್‌ ಹಾಗೂ ಬಿಜೆಪಿ ತೆಕ್ಕೆಗೆ ಬಿದ್ದಿವೆ. ಈ ಮೈತ್ರಿ ಒಕ್ಕಲಿಗರ ಮತ ಸಮೀಕರಣಕ್ಕೆ ಪ್ರಮುಖ ಕಾರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಳೆ ಮೈಸೂರಲ್ಲಿ ಮೇಲುಗೈ ಸಾಧಿಸಿತ್ತು. ಅಂದು ಕಾಂಗ್ರೆಸ್‌ ಒಕ್ಕಲಿಗ ಸಮುದಾಯದ ಮತಗಳನ್ನು ತಮ್ಮತ್ತ ಸೆಳೆದಿತ್ತು. ಆದರೆ, ವಿಧಾನಸಭೆ ಚುನಾವಣೆ ವರ್ಷದ ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರ ಮತಗಳು ಜೆಡಿಎಸ್‌ ಹಾಗೂ ಬಿಜೆಪಿ ಕಡೆ ವಾಲಿವೆ.

ಒಕ್ಕಲಿಗರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆ ಮೂಲಕ ಹಳೆ ಮೈಸೂರು, ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರ ಮತಗಳು ಬಿಜೆಪಿ ಹಾಗೂ ಜೆಡಿಎಸ್‌ಗೆ ಕ್ರೋಢೀಕರಣವಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಚಿಕ್ಕಬಳ್ಳಾಪುರದಲ್ಲಿ ಶೇ.53.74, ಮಂಡ್ಯದಲ್ಲಿ ಶೇ.58.34, ಮೈಸೂರಿನಲ್ಲಿ ಶೇ.53.59, ಕೋಲಾರದಲ್ಲಿ ಶೇ.51.02, ಬೆಂಗಳೂರು ಗ್ರಾಮಾಂತರದಲ್ಲಿ ಶೇ.56.21, ತುಮಕೂರಿನಲ್ಲಿ ಶೇ.55.31ರಷ್ಟು ಮತ ಪಾಲು ದೋಸ್ತಿ ಅಭ್ಯರ್ಥಿಗಳು ಗಿಟ್ಟಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಕ್ಕಲಿಗರು ಭದ್ರಕೋಟೆಯನ್ನು ಜೆಡಿಎಸ್‌ ಮರಳಿ ಪಡೆದಿದೆ.

ಲಿಂಗಾಯತ, ಮರಾಠ ಮತಗಳು:
ಅಲ್ಲದೇ, ಲಿಂಗಾಯತ ಮತಗಳೂ ಬಹುವಾಗಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಪರ ವಾಲಿವೆ. ಮಧ್ಯ ಕರ್ನಾಟಕದಲ್ಲಿ ಬಹುತೇಕ ಲಿಂಗಾಯತ ಸಮುದಾಯ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳಿಗೆ ಕ್ರೋಢೀಕರಣವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ವಾಲಿತ್ತು. ಆದರೆ, ಲೋಕಸಮರದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಮತ್ತು ಅದರ ದೋಸ್ತಿ ಪಕ್ಷದ ಅಭ್ಯರ್ಥಿಗೆ ಕ್ರೋಢೀಕರಣವಾಗಿರುವುದು ಕಂಡು ಬರುತ್ತದೆ. ಹೀಗಾಗಿ ಮಧ್ಯ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ದೋಸ್ತಿ ಅಭ್ಯರ್ಥಿಗಳು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತ ಹಾಗೂ ಮರಾಠ ಸಮುದಾಯದ ಮತಗಳು ಮರಳಿ ಬಿಜೆಪಿ ಕಡೆಗೆ ದೊಡ್ಡ ಪ್ರಮಾಣದಲ್ಲಿ ವಾಲಿವೆ. ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಬಾಗಲಕೋಟೆ, ಹಾವೇರಿ, ವಿಜಯಪುರ, ಚಿತ್ರದುರ್ಗದಲ್ಲಿ ಲಿಂಗಾಯತ ಸಮುದಾಯದ ಮತಗಳು ಬಿಜೆಪಿ ಕೈ ಹಿಡಿದಿರುವುದು ಕಾಣುತ್ತದೆ. ಬಹುತೇಕ ಕಡೆ ಲಕ್ಷಕ್ಕೂ ಅಧಿ ಕ ಮತಗಳ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಕಾಂಗ್ರೆಸ್‌ನತ್ತ ಅಹಿಂದ ಮತಗಳು:
ರಾಜ್ಯದಲ್ಲಿ ಅಲ್ಪಸಂಖ್ಯಾತರ ಮತಗಳು ಈ ಲೋಕ ಸಮರದಲ್ಲಿ ಕಾಂಗ್ರೆಸ್‌ನತ್ತ ಸಂಪೂರ್ಣವಾಗಿ ಕ್ರೋಢೀಕರಣವಾಗಿದೆ. ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಮತಗಳು ಕಾಂಗ್ರೆಸ್‌ಗೆ ವಾಲಿವೆ. ಕಲ್ಯಾಣ ಕರ್ನಾಟಕದಲ್ಲಿನ ಕುರುಬ ಮತಗಳು, ದಲಿತ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ಕಾಂಗ್ರೆಸ್‌ ಬುಟ್ಟಿಗೆ ಸೇರಿವೆ. ಹೀಗಾಗಿ ಕಲಬುರಗಿ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಬಹುತೇಕ ಅಹಿಂದ ಮತಗಳಿಂದ.

RELATED ARTICLES

Latest News