ಬೆಂಗಳೂರು, ಅ.16- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಂಗಳೂರಿನಲ್ಲಿಂದು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ವೇಣುಗೋಪಾಲ್ ಅವರು ಬೆಂಗಳೂರಿಗೆ ದಿಢೀರ್ ಆಗಮಿಸಿದ್ದು, ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೋಗಿ ಚರ್ಚೆ ನಡೆಸಿರುವುದು ಹಲವು ಕುತೂಹಲಗಳನ್ನು ಕೆರಳಿಸಿದೆ. ಮಲ್ಲಿಕಾರ್ಜುನಖರ್ಗೆಯವರು ಬೆಂಗಳೂರಿನಲ್ಲೇ ಇದ್ದಿದ್ದರಿಂದ ಕೆ.ಸಿ.ವೇಣುಗೋಪಾಲ್ ದೆಹಲಿಯಿಂದ ಆಗಮಿಸಿದ್ದಾರೆ. ನಿನ್ನೆ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ.ಶಿವಕುಮಾರ್ ಆತುರಾತುರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ದಿಢೀರ್ ಭೇಟಿ ಸಮಾಲೋಚನೆಗಳು ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ನಿರಂತರವಾಗಿ ಆದಾಯ ತೆರಿಗೆ ದಾಳಿಗಳಾಗುತ್ತಿದ್ದು, ನೂರಾರು ಕೋಟಿ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಕಾಕತಾಳೀಯ ಎಂಬಂತೆ ದಾಳಿಗೊಳಗಾದವರು ಮತ್ತು ಕಾಂಗ್ರೆಸ್‍ನ ಪ್ರಭಾವಿ ನಾಯಕರ ನಡುವಿನ ಸಂಪರ್ಕಗಳು ಸ್ಪಷ್ಟವಾಗುತ್ತಿದೆ. ಲೋಕಸಭೆ ಚುನಾವಣೆ, ಪಂಚರಾಜ್ಯಗಳ ಚುನಾವಣೆಗಳ ನಡುವೆ ಈ ದಾಳಿಗಳು ರಾಜಕೀಯ ಪ್ರೇರಿತ ಎಂಬ ಆರೋಪಗಳು ವ್ಯಾಪಕವಾಗಿವೆ.
ಬಿಜೆಪಿ ಪ್ರತಿಭಟನೆಗಳನ್ನು ಜನ ನಂಬುವುದಿಲ್ಲ : ಸಿಎಂ ಸಿದ್ದರಾಮಯ್ಯ
ದಾಳಿಯಲ್ಲಿ ಸಿಕ್ಕಿದೆ ಎಂದು ಹೇಳಲಾದ ಹಣಕಾಸಿನ ಕುರಿತು ವಿರೋಧಪಕ್ಷಗಳು ಹಲವು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಲೂಟಿಗಿಳಿದಿದೆ, ಗುತ್ತಿಗೆದಾರರ ಬಾಕಿ ಬಿಲ್‍ಗಳ ಪಾವತಿಯಲ್ಲಿ ಕಮಿಷನ್ ಪಡೆಯುತ್ತಿದೆ ಎಂಬೆಲ್ಲಾ ಟೀಕೆಗಳು ಕೇಳಿಬಂದಿವೆ.
ಈ ನಡುವೆ ಕೆ.ಸಿ.ವೇಣುಗೋಪಾಲ್‍ರವರು ಬೆಂಗಳೂರಿಗೆ ಆಗಮಿಸಿ ಎಐಸಿಸಿ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಲೋಕಸಭೆ ಅಧ್ಯಕ್ಷರ ಆಯ್ಕೆ, ಪಕ್ಷ ಸಂಘಟನೆ, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂಬ ವ್ಯಾಖ್ಯಾನಗಳಿವೆ.
ಮಾಮೂಲಿ ಎಂಬಂತೆ ಇದೊಂದು ಸೌಜನ್ಯದ ಭೇಟಿ, ವಿಶೇಷತೆ ಇಲ್ಲ ಎಂಬ ಹೇಳಿಕೆಗಳು ಕೇಳಿಬರುತ್ತಿವೆ. ಆದರೆ ಕೆ.ಸಿ. ವೇಣುಗೋಪಾಲ್ ಅವರ ದಿಢೀರ್ ಭೇಟಿ, ಆತುರಾತುರವಾಗಿ ನಡೆದ ಸಮಾಲೋಚನೆಗಳು ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಸರಾ ಸಂಭ್ರಮದಲ್ಲಿ ಮೈಸೂರಿನಲ್ಲಿರುವುದರಿಂದ ಸಮಾಲೋಚನಾ ಸಭೆಯಿಂದ ಹೊರಗುಳಿದಿದ್ದರು.
ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಗಮಮಂಡಳಿಗಳ ನೇಮಕಾತಿ ನಡೆಯುತ್ತಿದ್ದು, ಈ ಕುರಿತು ಚರ್ಚೆಗಳಾಗಿವೆ ಎಂದು ಹೇಳಲಾಗಿದೆ. ದಸರಾ ಹಬ್ಬಕ್ಕೂ ಮುನ್ನವೇ ನಿಗಮಮಂಡಳಿಗಳ ನೇಮಕಾತಿ ನಡೆಯುತ್ತಿದ್ದು, ಶಾಸಕರಿಗೆ ಶೇ. 50 ರಷ್ಟು, ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಶೇ. 50 ರ ಅನುಪಾತದಲ್ಲಿ ಅಧ್ಯಕ್ಷ ಸ್ಥಾನ ಹಂಚಿಕೆ ಮಾಡಲಾಗುತ್ತದೆ ಎಂಬ ವದಂತಿಗಳಿವೆ.
ಇಸ್ರೇಲ್ ಪಡೆಗಳಿಗೆ ಅಂತಿಮ ಎಚ್ಚರಿಕೆ ನೀಡಿದ ಇರಾನ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಸರಾ ಸಂಭ್ರಮ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದ ಹಾಗೆ ನಿಗಮಮಂಡಳಿಗಳ ನೇಮಕಾತಿಗೆ ಚಾಲನೆ ದೊರೆಯಲಿದೆ ಎಂಬ ನಿರೀಕ್ಷೆಗಳಿವೆ.