ಬೆಂಗಳೂರು,ಜೂ.8- ಚಿಟ್‌ಫಂಡ್‌ನ ಡೆವಲಪ್‌ಮೆಂಟ್ ಆಫೀಸರ್ ಒಬ್ಬರನ್ನು ಕೊಲೆ ಮಾಡಿ ಮಚ್ಚಿನಿಂದ ದೇಹವನ್ನು ಭೀಕರವಾಗಿ ತುಂಡು ತುಂಡಾಗಿ ಮಾಡಿ ಮೋರೆಯಲ್ಲಿ ಎಸೆದಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಬೀಭತ್ಸ ಕೊಲೆ ಸಂಬಂಧ ಟ್ರಾವೆಲ್ಸ್ ಮಾಲೀಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಡೆವಲಪ್‌ಮೆಂಟ್ ಅಧಿಕಾರಿಗೆ ಟ್ರಾವೆಲ್ಸ್ ಮಾಲೀಕ ಎರಡು ವರ್ಷದಿಂದ ಪರಿಚಯವಿತ್ತು. ಟ್ರಾವೆಲ್ಸ್ ಮಾಲೀಕನ ಬಳಿ ಈ ಅಧಿಕಾರಿ 5 ಲಕ್ಷಕ್ಕೆ ಚೀಟಿ ಹಾಕಿದ್ದರು.
ಚೀಟಿ ಹಣ ಕೊಡದ ಕಾರಣ ಆಗಾಗ್ಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಕಳೆದ 28ರಂದು ಈ ಅಧಿಕಾರಿ ಚೀಟಿ ಹಣ ಕೇಳಲು ಆರೋಪಿ ಮನೆಗೆ ಹೋದಾಗ ಇಬ್ಬರ ನಡುವೆ ಹಣದ ವಿಚಾರವಾಗಿ ಜಗಳವಾಗಿದೆ. ಆ ಸಂದರ್ಭದಲ್ಲಿ ಆರೋಪಿಯು ಚಾಕುವಿನಿಂದ ಡೆವಲಪ್‌ಮೆಂಟ್ ಅಧಿಕಾರಿಗೆ ಇರಿದಿದ್ದಲ್ಲದೆ ಜಾಕ್ ಮತ್ತು ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.
ನಂತರ ಅವರ ದೇಹವನ್ನು ಮಚ್ಚಿನಿಂದ ಮೂರು ತುಂಡುಗಳನ್ನಾಗಿ ಮಾಡಿ ಮೂರು ಬ್ಯಾಗ್‌ಗಳಲ್ಲಿ ತುಂಬಿಕೊಂಡು ಬೆಳತ್ತೂರು ಮೋರಿ ಬಳಿ ಹೋಗಿ ಬ್ಯಾಗ್‌ಗಳನ್ನು ಬಿಸಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದನು.
ಈ ನಡುವೆ ಡೆವಲಪ್‌ಮೆಂಟ್ ಅಧಿಕಾರಿ ಕಾಣೆಯಾಗಿರುವ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈ ಪ್ರಕರಣ ರಾಮಮೂರ್ತಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಾಗ ಡೆವಲಪ್‌ಮೆಂಟ್ ಆಫೀಸರ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ನಂತರ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಟ್ರಾವೆಲ್ಸ್ ಮಾಲೀಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಕೊಲೆಯಾಗಿರುವ ಡೆವಲಪ್‌ಮೆಂಟ್ ಅಫೀಸರ್‌ನ ಮೃತ ದೇಹಕ್ಕಾಗಿ ಮೂರು ದಿನಗಳ ಕಾಲ ಹುಡುಕಾಟ ನಡೆಸಿದರಾದರೂ ಪತ್ತೆಯಾಗಿಲ್ಲ.
ಕಳೆದೊಂದು ವಾರದಿಂದ ನಗರದಲ್ಲಿ ಮಳೆಯಾಗುತ್ತಿದ್ದು, ಬಹುಶಃ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತದೇಹ ಹುಡುಕಲು ಮಂಗಳೂರಿನಿಂದ ನುರಿತ ತಜ್ಞರನ್ನು ಕರೆಸಿಕೊಂಡರಾದರೂ ಇದುವರೆಗೂ ಮೃತದೇಹ ಪತ್ತೆಯಾಗಿಲ್ಲ. ಆದರೂ ಸಹ ಪೊಲೀಸರು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.