ಬೆಂಗಳೂರು, ಜೂ.9- ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗುವುದು ಬಹುತೇಕ ಖಚಿತವಾಗಿದ್ದು, ಜೆಡಿಎಸ್‍ನಲ್ಲಿ ಸಂಭ್ರಮಾಚರಣೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ವಿಶ್ವಾಸದಿಂದ ಜೆಡಿಎಸ್‍ನಲ್ಲಿ ಸಂಭ್ರಮ ಮನೆ ಮಾಡಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಅಂತರದಿಂದ ಗೆದ್ದಿರುವ ಕುಮಾರಸ್ವಾಮಿ ಅವರು ಮೂರನೇ ಬಾರಿಗೆ ಲೋಕಸಭೆ ಪ್ರವೇಶ ಮಾಡಿದ್ದಾರೆ. ಮೊದಲ ಬಾರಿಗೆ ಕೇಂದ್ರ ಸಚಿವರಾಗುತ್ತಿದ್ದಾರೆ. ಕುಮಾರಸ್ವಾಮಿ ಕೇಂದ್ರ ಸಚಿವರಾಗುವುದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನೂತನ ಸಂಸದ ಡಾ.ಸಿ.ಎನ್.ಮಂಜುನಾಥ್ ಖಚಿತ ಪಡಿಸಿದ್ದಾರೆ.
ಕುಮಾರಸ್ವಾಮಿ ಮಂತ್ರಿಯಾಗುತ್ತಿರುವುದು ಅವರ ಕುಟುಂಬಕ್ಕಷ್ಟೇ ಅಲ್ಲ, ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಖುಷಿ ತಂದಿದೆ. ಜತೆಗೆ ಆತ್ಮವಿಶ್ವಾಸ ತುಂಬಿ ಉತ್ಸಾಹದಿಂದ ಕಾರ್ಯ ನಿರ್ವಹಿಸುವಂತೆ ಮಾಡಿದೆ. ಹೀಗಾಗಿ ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭವನ್ನು ಜೆಡಿಎಸ್ ಕಚೇರಿಯಲ್ಲಿ ದೊಡ್ಡ ಎಲ್‍ಇಡಿ ಪರದೆ ಅಳವಡಿಸಿಕೊಂಡು ವೀಕ್ಷಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರದ ಬಳಿಕ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಲಿದ್ದಾರೆ.
ಎನ್‍ಡಿಎ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಹೆಚ್.?ಡಿ.ಕುಮಾರಸ್ವಾಮಿ ಅವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಖಾತ್ರಿ ಇರುವುದರಿಂದಲೇ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ , ಸೊಸೆ ರೇವತಿ ಸೇರಿದಂತೆ ಕುಟುಂಬ ಸದಸ್ಯರು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಶಾಸಕ ಜಿ.ಟಿ.ದೇವೇಗೌಡರು, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್‍ಗೌಡ ಸೇರಿದಂತೆ ಪಕ್ಷದ ಹಲವು ನಾಯಕರು ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕೇಂದ್ರದ ಮಂತ್ರಿ ಆಗುತ್ತಿರುವುದು ಬಹಳ ಸಂತೋಷವಾಗಿದೆ. ಕರ್ನಾಟಕ ಜನತೆ ತುಂಬಾ ಖುಷಿ ಪಡುತ್ತಾರೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದರು. ಈಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶ ಮಾಡಿದ್ದಾರೆ.